Sunday, January 25, 2015

ಹಾಲುಮತ ಕುರುಬ ಮತ್ತು ಲಿಂಗವಂತ

ಸಂಶೋಧನೆಯ ಲೇಖನಗಳಲ್ಲ, ತೀರ್ಪಿನ ಲೇಖನಗಳು’ (ಸಂಗತ ಡಿ.15, ಕೆ.ಆರ್. ಬಸವರಾಜ) ಲೇಖನಕ್ಕೆ ಪ್ರತಿಕ್ರಿಯೆ: ಲೇಖಕರು ಎರಡು ಆಕ್ಷೇಪಗಳನ್ನು ಎತ್ತಿ ಒಂದು ಆಸರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

‘ನಾಗರಿಕ ಮನುಷ್ಯಕುಲದ ಚರಿತ್ರೆ ಆರಂಭವಾಗುವುದು ಪಶುಪಾಲಕರಾದ ಹಟ್ಟಿಕಾರರಿಂದ’ ಎಂಬ ಶಂ.ಬಾ.ಜೋಶಿಯವರ ನುಡಿ ಇಲ್ಲಿ ಹೆಚ್ಚು ಪ್ರಸ್ತುತ. ಹಟ್ಟಿಕಾರರ (ಪಶುಪಾಲಕ - ಪಟ್ಟಿಕಾರ) ಪ್ರಾಚೀನತೆಗೆ ಪ್ರಾಚೀನ ಹಬ್ಬ, ಪ್ರಥಮ ಬೆಳೆಗಳಾದ ಹಟ್ಟಿಹಬ್ಬ (ದೀಪಾವಳಿ) ಮತ್ತು ಹತ್ತಿ (ಹಟ್ಟಿಕಾರರ ಬೆಳೆ) ಬೆಳೆಗಳು ಸಾಕ್ಷಿಯಾಗಿ ಉಳಿದಿವೆ. ಇಂತಹ ಹಟ್ಟಿಕಾರರ (ವಿಶಾಲ ಹಾಲುಮತ) ಸಮುದಾಯದಿಂದ ಹೊರ ಹರಿವು ಪಡೆದು ಜನ್ಮ ತಳೆದ ಗೊಲ್ಲ, ಗೋವುಳ, ಈಡಿಗ, ಒಕ್ಕಲಿಗ, ನಾಡವ, ಬೇಡ, ಭಟ್ಟಿ, ಜೇಡ, ರಜಪೂತ ಇತ್ಯಾದಿ ಅಸಂಖ್ಯ ಜಾತಿ ಜನಾಂಗವನ್ನು ತಜ್ಞರು ಗುರುತಿಸಿದ್ದಾರೆ. ಪಶುಪಾಲಕರ ಮೂಲ ಸಂಪ್ರದಾಯ, ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಂಡು ‘ಹಾಲುಮತ’ ಎಂದು ಕರೆಸಿಕೊಳ್ಳುತ್ತಿರುವ ಪ್ರಸ್ತುತ ಕುರುಬ ಜನಾಂಗ ಅದರ ಒಂದು ಘಟಕ ಮಾತ್ರ.
ಮೊದಲನೆಯ ಆಕ್ಷೇಪ, ಬಸವರಾಜ ಅವರು ‘ಒಂದು ಜಾತಿಗೆ ಸೇರಿದ ವ್ಯಕ್ತಿಗಳು ಒಬ್ಬ ಪೂಜನೀಯ ವ್ಯಕ್ತಿಯ ಪೂಜೆಯನ್ನು ಕೈಗೊಂಡರೆ ಮತ್ತು ಆ ಜನಾಂಗ ಅವನನ್ನು ಆರಾಧಿಸಿದರೆ ಪೂಜನೀಯ ವ್ಯಕ್ತಿ ಆ ಜಾತಿಗೆ ಸೇರಲಾರ’ ಎಂಬ ತೆಳುವಾದವನ್ನು ಕೇವಲ ಒಂದು ದೇವಸ್ಥಾನದ ಉದಾಹರಣೆ ಕೊಟ್ಟು ಹೇಳುತ್ತಾರೆ. ಮಹಾರಾಷ್ಟ್ರ, ಉತ್ತರ, ಮಧ್ಯ ಮತ್ತು ದಕ್ಷಿಣ ಕರ್ನಾಟಕದ ನೂರಾರು ರೇವಣಸಿದ್ಧರ, ಸಿದ್ಧರಾಮರ ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಆಚರಣೆಗಳನ್ನು ಇವರು ಗಮನಿಸಬೇಕಾಗಿದೆ. ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿರುವ ರೇವಣಸಿದ್ಧ ಮತ್ತು ಸಿದ್ಧರಾಮರ ಮಠಗಳ ಆಶ್ರಯದಲ್ಲಿ ನಡೆಯುವ ಬೀರದೇವರ ‘ದಳವಾಯಿ (ಕುರುಬ ಜನಾಂಗದ ಜೀವಂತ ಬೀರದೇವರು) ಸಂಪ್ರದಾಯ’ ಮತ್ತು ಕಡೂರು ತಾಲೂಕಿನ ಖಂಡುಗದಹಳ್ಳಿ ಸುತ್ತಮುತ್ತಲಿನ ನಲವತ್ತು ಗ್ರಾಮಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ‘ಭಿಂಗಯ್ಯ (ಕುರುಬ ಜನಾಂಗದ ಜೀವಂತ ಗುರು ಸೋಮೇಶ್ವರ) ಸಂಪ್ರದಾಯಗಳು ಸುಮಾರು ಎಂಟು ನೂರು ವರ್ಷಗಳ ಹಿಂದೆ ರೇವಣಸಿದ್ಧ ಮತ್ತು ಸಿದ್ಧರಾಮರು ಹುಟ್ಟು ಹಾಕಿದ ಆಚರಣೆಗಳಾಗಿವೆ. ಇವು ಕುರುಬ ಜನಾಂಗ ಮತ್ತು ಸಿದ್ಧರೇವಣ, ಸಿದ್ಧರಾಮರ  ಧಾರ್ಮಿಕ ಕರುಳ ಬಳ್ಳಿಯ ಸಂಬಂಧಗಳ ದ್ಯೋತಕವೆನ್ನಬಹುದು.
ಎಲ್ಲ ಜಾತಿಯವರು ಈ ಪುಣ್ಯಪುರುಷರನ್ನು ಪೂಜಿಸುತ್ತಿರಬಹುದು. ಆದರೆ ತಾವೇ ಸೂಚಿಸಿದ ಜಾತಿಗಳು ವಿಶಾಲ ಹಾಲುಮತದ ವ್ಯಾಪ್ತಿಯಲ್ಲಿ ಬರುವುವೆಂದು ಇವರೇಕೆ ಗಮನಿಸುವುದಿಲ್ಲ? ಜಾತಿಯನ್ನು ಇಂದಿನ ಸಂಕುಚಿತ ದೃಷ್ಟಿಯಿಂದ ನೋಡದೆ, ಪ್ರಸ್ತುತ ವೃತ್ತಿ ಆಧಾರಿತ ಜಾತಿ ನಿರ್ಮಾಣದ ಮೂಲ ನೆಲೆ ಹಟ್ಟಿಕಾರರು-ಪಶುಪಾಲಕರು-ಹಾಲುಮತಸ್ಥರು ಎಂಬ ಸಿದ್ಧಾಂತವು ಪ್ರತಿ ಸಂಶೋಧನೆಯ ಸತ್ಯ ದರ್ಶನವೆಂಬುದನ್ನು ಕಲಬುರ್ಗಿಯವರನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಲಿ. ಎರಡನೆಯದಾಗಿ, ರೇವಣಸಿದ್ಧನು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಡೇರೆ ಅವರು ‘ರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ‘ಅಪ್ಪಾಚಿವಾಡಿ’. ಇವನು ದುಗ್ಧ ಸಂಪ್ರದಾಯದ ಧನಗಾರ(ಕುರುಬ) ಮೂಲದ ಪೂಜನೀಯ ವ್ಯಕ್ತಿ’ ಎಂದು ಪ್ರತಿಪಾದಿಸಿದ್ದಾರೆ (ಡಾ. ರಾ. ಚಿ. ಢೇರೆ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ).
ಎರಡನೆಯ ಆಕ್ಷೇಪ, ‘ಕುರುಬರ ಪರಿಷ್ಕೃತ ರೂಪ ಕುಡು ಒಕ್ಕಲಿಗರು (ಲಿಂಗಾಯತದ ಒಂದು ಪಂಗಡ)’ ಎಂಬ ಎಂ.ಎಂ. ಕಲಬುರ್ಗಿ ಅವರ ವಾದವನ್ನು ಲೇಖಕರು ಪೂರ್ವಗ್ರಹ ಪೀಡಿತರಾಗಿ ಟೀಕಿಸುತ್ತಾರೆ. ‘ಯಾವುದೇ ಜನಾಂಗದ ಮೂಲ ಆ ಜನಾಂಗದ ದೈವಗಳು, ಗುರು ಪರಂಪರೆ ಮತ್ತು ಧಾರ್ಮಿಕ ಆಚರಣೆಗಳಿಂದ ಹೊರಹೊಮ್ಮುತ್ತದೆ.’ ಇವರೊಮ್ಮೆ ಇವೆರಡೂ ಜನಾಂಗಗಳ ದೈವ, ಪರಂಪರೆ ಮತ್ತು ಆಚರಣೆಗಳತ್ತ ದೃಷ್ಟಿಹರಿಸಲಿ. ಕುರುಬರ ಬೀರಪ್ಪ, ಗುಡ್ಡದ ಮಲ್ಲಯ್ಯ, ಮೈಲಾರ ದೈವಗಳು ಲಿಂಗವಂತರಲ್ಲಿ ವೀರಭದ್ರ, ವಿರೂಪಾಕ್ಷ, ಮಲ್ಲಿಕಾರ್ಜುನರಾಗಿದ್ದಾರೆ. ಕುರುಬರ ದೈವೀಪುರುಷರಾದ ದಳವಾಯಿ, ಈರಗಾರರು ಲಿಂಗವಂತರಲ್ಲಿ ಪುರವಂತರಾಗಿದ್ದಾರೆ. ಕುರುಬರ ಕುಲಗುರುಗಳು (ಇವರನ್ನು ರೇವಣಸಿದ್ಧರು ಹುಟ್ಟುಹಾಕಿದ್ದಾರೆ) ಒಡೆಯರು. ಲಿಂಗವಂತರಲ್ಲಿ ಜಂಗಮರಾಗಿ (ಐನೋರು) ಪರಿಷ್ಕೃತಗೊಂಡಿದ್ದಾರೆ. ಹಾಲುಮತ ಕುರುಬರ ಕುಲದೈವ ಬೀರಪ್ಪ ಮುಳ್ಳು ಗದ್ದುಗೆಯೇರಿ ಅಗಿ ಹಾಯುವ ಆಚರಣೆಯು ಇಂದು ಲಿಂಗವಂತರಲ್ಲಿ ಗುಗ್ಗುಳಾಚರಣೆಯಾಗಿ ಪರಿವರ್ತನೆಗೊಂಡಿದೆ.
ಹೀಗೆ ಅನೇಕ ಅಚರಣೆಗಳನ್ನು ಲಿಂಗವಂತವು ಸ್ವೀಕರಿಸಿದೆ. ಲಿಂಗವಂತವು ಧಾರ್ಮಿಕ ದೇಹ ರಚನೆ ಪಡೆದು ‘ವೀರಶೈವ’ ಆದ ತಕ್ಷಣ ಮೂಲವು ಮರೆಯಾಗುವುದಿಲ್ಲ. ಇವೆಲ್ಲ ಮೂಲ ಆಕರಗಳ ಅಧ್ಯಯನ ನಡೆಸಿ ಡಾ.ಎಂ.ಎಂ. ಕಲಬುರ್ಗಿಯವರು ಮೇಲಿನ ನಿರ್ಣಯಕ್ಕೆ ಬಂದಿರುತ್ತಾರೆ. ಒಂದರ್ಥದಲ್ಲಿ ಕೇವಲ ಕುಡು ಒಕ್ಕಲಿಗರಲ್ಲ. ಲಿಂಗವಂತರ ಪ್ರಮುಖ ಪಂಗಡಗಳಾದ ನೊಣಬ (ಕುರುಬರಲ್ಲಿ ನೊಳಂಬ ಕುಲ), ಸಾದ (ಕುರುಬರಲ್ಲಿ ಸಾದ ಕುಲ), ಕುಡು ಒಕ್ಕಲಿಗ ಮತ್ತು ರಡ್ಡಿ (ಕುರುಬರಲ್ಲಿ ರಟ್ಟ ಕುಲ) ಇವರೆಲ್ಲ ಕುರುಬದ ಪರಿಷ್ಕೃತ ರೂಪಗಳು ಎಂಬುದೂ ಗುಟ್ಟಾಗಿ ಉಳಿದಿಲ್ಲ. ಈ ಪ್ರಕ್ರಿಯೆಯನ್ನು ಎರಡು ಜನಾಂಗಗಳ ಸಂಕರಶೀಲತೆ ಎಂದೂ ದಾಖಲಿಸಬಹುದು ಅಲ್ಲವೇ?
ಲೇಖಕರು ತಮ್ಮ ಆಸರೆಗಾಗಿ ಜಿ. ವೆಂಕಟಸುಬ್ಬಯ್ಯನವರ ಮಾತುಗಳನ್ನು ಎಳೆದು ತಂದಿದ್ದಾರೆ. ವೆಂಕಟಸುಬ್ಬಯ್ಯನವರ ಹೇಳಿಕೆ ಶೃದ್ಧಾವಂತ ಸಂಶೋಧಕನ ದೃಢತೆ, ಆತ್ಮವಿಶ್ವಾಸ ಕುರಿತ ಮೆಚ್ಚುಗೆಯಾಗಿದೆ. ಇದನ್ನು ಬಸವರಾಜರು ತಮ್ಮ ಮೂಗಿನ ನೇರಕ್ಕೆ ತಿರುಚಿ ಅರ್ಥೈಸಿರುವುದು ಅಪಾರ್ಥವೆನ್ನಬಹುದು.ಕಲಬುರ್ಗಿ ಅವರನ್ನು ಇಡಿಯಾಗಿ ಓದದೆ ಬಿಡಿಬಿಡಿಯಾಗಿ ಓದಿದವರ ಸ್ಥಿತಿ ಇದು.

No comments:

Post a Comment