ಬದುಕನ್ನು ಸುಂದರವಾಗಿಸುವ ಅಂಶಗಳಾವುವು...
- ಮಾಲತೇಶ್ ಅರಸ್ ಹರ್ತಿಮಠ
ಛೇ.. ಯಾಕೋ ನನಗೆ ಈ ಬದುಕೇ ಬೇಡ ಅನ್ನಿಸಿದೆ. ಯಾವಾಗ ನೋಡಿದ್ರೂ ಟೆನ್ಷ್ಷನ್ ಮಾರಾಯ. ಬೆಳಗ್ಗೆ ಎದ್ದಾಗಿನಿಂದ ಇಲ್ಲಿ ತನಕ ಯಾಕೋ ಮನಸ್ಸೇ ಸರಿ ಇಲ್ಲಾ.. ಹೀಗೆ ಸದಾ ಕಾಲವೂ ಗುನುಗುಡುವ ಮನಸ್ಸುಗಳಿಗೇನು ಕೊರತೆ ಇಲ್ಲ. ಆದ್ರೆ ಇಲ್ಲಿ ನಾವು ಸೊಲುತ್ತಿರುವುದಾದರೂ ಹೇಗೆ. ಸೋಲನ್ನೊಪ್ಪಿಕೊಳ್ಳುತ್ತಿರುವುದಾದರೂ ಹೇಗೆ. ಇದೆಲ್ಲವನ್ನು ನಾನಿಲ್ಲಿ ಬಿಚ್ಚಿಟ್ಟಿದ್ದೇನೆ.
ಹೌದು.. ನನ್ನ ಬದುಕು ಸುಂದರವಾಗಿರಬೇಕು. ನಾನು ಸದಾ ಕಾಲವೂ ಖುಷಿಯಾಗಿರಬೇಕು... ನಾನು ಬದುಕಿನಲ್ಲಿ ಗುರಿ ಮುಟ್ಟಬೇಕು. ಹೀಗೆ ಬೇಕುಗಳ ಪಟ್ಟಿ ಮಾಡುತ್ತಲೇ ಸಾಗಿದರೇ ಇಲ್ಲಿ ಬದುಕು ಸುಂದರವಾಗೊಲ್ಲ, ಬದಲಿಗೆ ನಾವು ಬದುಕನ್ನು ಸುಂದರ ವಾಗಿಸುವ ಅಂಶಗಳಾವುವು ಎಂಬುದನ್ನು ಅರಿಯಬೇಕು.
ನಾನು ಇಲ್ಲಿ ಮೆಲ್ಲಗೆ ಆಲೋಚಿಸಿ, ಚಿಂತಿಸಿ ಬರೆದವಲ್ಲ ಬದಲಿಗೆ ಎಲ್ಲವೂ ಇದ್ದರೇ ಅಲ್ಲಿ ಬದುಕು ಹಸನಾಗಿರುತ್ತದೆ ಎಂಬ ಬೃಹತ್ ಆಕಾಂಕ್ಷೆ ಎಂಬುದು ಇಲ್ಲಿದೆ.
ಪ್ರೀತಿ :
ನಿಜಕ್ಕೂ ಪ್ರೀತಿ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿರಬೇಕಾದ ವಸ್ತುವಾಗಿದೆ. ಇಲ್ಲಿ ಹೃದಯದೊಂದಿಗೆ ಮಾತನಾಡುವಾಗ ನಮಗೆ ಪ್ರೀತಿಯ ಆಸರೆ ಬೇಕೇ ಬೇಕು. ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಆದರೇ ಅದು ಬದುಕನ್ನು ರೂಪಿಸಿಕೊಳ್ಳಬೇಕೆನ್ನುವುದಕ್ಕಿಂತ ಮುಂಚಿನ ಮಾತಾಗಿರುತ್ತದೆ. ಆದ್ರೆ ನಿಜಕ್ಕೂ ಬದುಕು ಸುಂದರವಾಗಿರಲು ಪ್ರೀತಿ ಅತ್ಯವಶ್ಯ. ಪ್ರೀತಿಸುವ ಮನಸ್ಸು ಬೇಕೇ ಬೇಕು. ನಮ್ಮಲ್ಲಿ ಎಲ್ಲರೂ ನಮ್ಮವರೆಂದು ಪ್ರೀತಿಸುವ ಮನಸ್ಸಿದ್ದರೇ ಅಲ್ಲಿ ಬದುಕು ಸುಂದರ ಸುಮಧುರ.
ಆನಂದ :
ಸದಾ ಕಾಲವು ನಾವು ಸಂಭ್ರಮಿಸುತ್ತಲೇ ಇರಬೇಕೆಂದರೇ ನಮಗೆ ಆನಂದ ಮುಖ್ಯ. ನಾನು ನಗುನಗುತ್ತಲೇ ಎಲ್ಲವನ್ನು ಸ್ವೀಕರಿಸಬೇಕಿದೆ. ನಗು ನಗುತ್ತಲೇ ಎಲ್ಲವನ್ನು, ಎಲ್ಲರನ್ನು ಗೌರವಿಸಬೇಕಾಗುತ್ತದೆ. ಮನದೊಳಗೊಂದು ಹೊರಗೊಂದು ಇರುವ ಬದುಕು ಎಲ್ಲವನ್ನು ಆನಂದದಿಂದ ಸ್ವೀಕರಿಸಿದರೇ ಬದುಕು ನಿಜಕ್ಕೂ ನೂರಕ್ಕೆ ನೂರರಷ್ಟು ಸುಂದರ ಸುಮಧುರ.
ಕಾಳಜಿ: ಇಂದು ಕಾಳಜಿ ಎಂಬುದನ್ನು ಯಾರು ರೂಢಿಸಿಕೊಂಡಿರುತ್ತಾರೋ ಅಲ್ಲಿ ಬದುಕು ಖುಷಿಯಾಗಿರುತ್ತದೆ. ನಾವು ನಮ್ಮವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ನಮ್ಮ ಮನೆ . ನಮ್ಮ ಹೆಂಡತಿ ಮಕ್ಕಳು. ಪಾಲಕರು, ಬಂಧುಗಳು,
ಅಕ್ಕಪಕ್ಕದ ಮನೆಯವರು ಎಂಬ ಕಾಳಜಿಯು ಅತ್ಯವಶ್ಯವಾಗಿದ್ದರೇ ಬದುಕು ಸುಂದರವಾಗಿರುತ್ತದೆ. ನಾನು ಎಂಬುದನ್ನು ಮರೆತು ನಾವು ಎಂಬ ಕಾಳಜಿ ಇರಬೇಕು. ಅವರಿಗೆ ಆಗುವ ಕಷ್ಟಗಳನ್ನು ನಾವು ಬಗೆಹರಿಸುವ ಕಾಳಜಿ ಇರಬೇಕು. ಅನಾರೋಗ್ಯದಿಂದ ಬಳಲಿದವರ ಕಣ್ಣೀರೊರೆಸುವ ಸಮಯ ನಮ್ಮದಾಗಬೇಕು ಆಗ ಬದುಕು ಸುಂದರ ಸುಮಧುರ.
.
ನಂಬಿಕೆ
: ನಮ್ಮಲ್ಲಿ ನಂಬಿಕೆ ಇಂದು ಮಣ್ಣಿನ ಮಡಕೆಯಂತೆ ಆಗಿದೆ. ಮಡಕೆ ಹೇಗೆ ತನ್ನ ಆಯಸ್ಸನ್ನು ಹೊಂದಿರುತ್ತದೆಯೋ ಆಗೆಯೇ ನಂಬಿಕೆ ಎಂಬುದು ಕ್ಷಣ ಆಯಸ್ಸನ್ನು ಹೊಂದಿದೆ. ಇಂದು ಗಂಡನ ಮೇಲೆ ಹೆಂಡತಿಗೆ ನಂಬಿಕೆ ಇಲ್ಲ. ಹೆಂಡತಿಯ ಮೇಲೆ ಗಂಡನಿಗೆ ನಂಬಿಕೆ ಇಲ್ಲ. ಇನ್ನೂ ಹತ್ತಿರವಾದರೇ ಮಕ್ಕಳು ನಮ್ಮನ್ನು ಸಾಕಿ ಸಲಹುತ್ತಾರೆಂಬ ನಂಬಿಕೆ ಪಾಲಕರಲ್ಲೇ ಇಲ್ಲ. ಹೀಗೆ ಇರುವಾಗ ಇಲ್ಲಿ ಬದುಕನ್ನು ಹಸನು ಮಾಡಿಕೊಳ್ಳಲು ನಂಬಿಕೆ ಅತೀ ಮುಖ್ಯ. ‘‘ಒಮ್ಮೆ ನಂಬಿದ ಬಳಿಕ ನಂಬಿಕೆ ಬಿಡಬೇಡ. ನಂಬಿ ಕೆಟ್ಟರೇ ಯಾರನ್ನು ನಂಬಬೇಡ’’ ಎಂಬ ಸ್ವಾಮಿ ವಿವೇಕಾನಂದರ ಮಾತು ನಿಜಕ್ಕೂ ಇಂದು ಪ್ರಸ್ತುತ. ಹಾಗಾಗಿ ನಂಬಿಕೆ ಇದ್ದರೇ ಬದುಕು ಸುಂದರ ಸುಮಧುರ.
ವಿಶ್ವಾಸ : ಓಡುವ ನದಿ ಸಾಗರಕೆ ಸೇರಲೇಬೇಕು... ನಾನು ನೀನು ಎಂದಾದರೂ ಸೇರಲೇ ಬೇಕು ಎಂಬ ಕವಿವಾಣಿ ಕಿವಿಯಲ್ಲಿ ರಿಂಗಣಿಸುತ್ತದೆ. ಯಾಕಂದ್ರೆ ಬದುಕಿನಲ್ಲಿ ವಿಶ್ವಾಸ ಅತಿ ಮುಖ್ಯ ಬದುಕು ಸುಂದರವಾಗಿರಲು ವಿಶ್ವಾಸವೂ ಅತ್ಯಮೂಲ್ಯವಾದುದು. ವಿಶ್ವಾಸ ಇಲ್ಲದೆ ಯಾವುದೇ ಕೆಲಸವನ್ನು ಹೇಗೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ವಿಶ್ವಾಸ ಇಲ್ಲದೆ ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯ. ಹಾಗಾಗಿ ಪ್ರತಿ ಸಾರಿಯೂ ವಿಶ್ವಾಸವೂ ಪ್ರಮುಖವಾಗುತ್ತಲೇ ಹೋಗುತ್ತಲೇ ಹೋಗುತ್ತದೆ. ಹಾಗಾಗಿ ವಿಶ್ವಾಸವಿದ್ದರೇ ಬದುಕು ಸುಂದರ ಸುಮಧುರ.
ಆತ್ಮಸಾಕ್ಷಿ: ನಾವು ಜಗತ್ತಿನಲ್ಲಿ ಯಾರನ್ನಾದರೂ ಏಕೆ ದೇವರನ್ನು ಮೋಸ ಮಾಡಬಹುದು ಆದರೇ ಆತ್ಮಸಾಕ್ಷಿಯನ್ನು ಮೋಸ ಮಾಡಲು ಸಾದ್ಯವಿಲ್ಲ. ಯಾಕಂದ್ರೆ ನಮಗೆ ನಮ್ಮ ಆತ್ಮ ಸಾಕ್ಷಿಯೇ ಮುಖ್ಯ ಯಾವುದೇ ಕೆಲಸ ಮಾಡಿದರೂ ಆತ್ಮಸಾಕ್ಷಿಯ ವಿರುದ್ದವಾಗಿ ಮಾಡಲಾಗುವುದಿಲ್ಲ. ಸದಾ ಕಾಲವೂ ನಾವು ಆತ್ಮಸಾಕ್ಷಿಯ ಜೊತೆಗೆ ಮಾತನಾಡುತ್ತಲೇ ಇರುತ್ತೇವೆ. ಹಾಗಾಗಿ ಆತ್ಮಸಾಕ್ಷಿ ಇದ್ದರೇ ಬದುಕು ಸುಂದರ ಸುಮಧುರ.
ಸವಾಲು: ಸವಾಲುಗಳು ಇಂದು ಕ್ಷಣ ಕ್ಷಣಕ್ಕೂ ಬರುತ್ತಿರುತ್ತವೆ. ಬದಲಾಗುತ್ತಿರುತ್ತವೆ ಇಲ್ಲಿ ಬದುಕು ಎಂಬುದು ಸುಂದರವಾಗಲು ಸವಾಲುಗಳಿರಬೇಕು. ಯಾಕಂದ್ರೆ ನಮಗೆ ಸವಾಲುಗಳಿಲ್ಲದೇ ಹೋದರೇ ಬದುಕನ್ನು ಸುಂದರವಾಗಿಸಲು ಸಾಧ್ಯವಿಲ್ಲ. ಬೇರೆಯವರಂತೆ ಇರಬೇಕು. ಇಲ್ಲಾ ಬೇರೆಯವರಿಗೆಂತ ಭಿನ್ನವಾಗಿ ಬದುಕಬೇಕೆಂದರೇ ಸವಾಲುಗಳನ್ನು ಎದುರಿಸಬೇಕು. ಸವಾಲೆಂಬ ಸವಾಲುಗಳು ನಮ್ಮನ್ನು ಕಾಡುತ್ತಿರಬೇಕು. ಇದನ್ನು ಮೆಟ್ಟಿನಿಂತು ನಾನು ಮುನ್ನಡೆಯುವೆ ಎಂಬ ಆಶಾ ಭಾವ ನಮ್ಮಲ್ಲಿ ಮೂಡಬೇಕು. ಈ ಸವಾಲುಗಳನ್ನ ದಾಟಿ ನಾನು ಜಯಸಾಧಿಸಿದೆ ಎಂಬ ಹೆಮ್ಮೆ ಇರಬೇಕು ಆಗ ಬದುಕಿನ ಅರ್ಥ ತಿಳಿಯತ್ತದೆ ಹಾಗಾಗಿ ಸವಾಲುಗಳಿದ್ದರೇ ಅಲ್ಲಿ ನಮ್ಮ ಬದುಕು ಸುಂದರ ಸುಮಧುರ.
ಅವಲಂಬನೆ : ಇಂದು ನಾವು ಅವಲಂಬನೆಯ ಬದುಕಿನಲ್ಲಿ ಸಾಯುತ್ತಿದ್ದೇವೆ. ಅಪ್ಪನ ಆಸ್ತಿ ಇದೆ ಎಂಬ ಕಾರಣಕ್ಕೆ, ಅಪ್ಪನ ಆಸ್ತಿಯ ಅವಲಂಬನೆಗೆ ನಾನು ಜೋತು ಬಿದ್ದಿದ್ದೇವೆ. ನನ್ನ ಹಿತದೃಷ್ಟಿಯಲ್ಲಿ ನಾವು ಯಾರ ಅವಲಂಬನೆಯಲ್ಲಿಯೂ ಬದುಕಬಾರದು. ಬದುಕನ್ನು ನಾವೇ ರೂಪಿಸಿಕೊಂಡು ಬಾಳಬೇಕು. ಯಾವುದೇ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಂಡಾಗ ಅಥವಾ ಏನೂ ಇಲ್ಲವಾದಾಗ ಆತನನ್ನು ಯಾರು ನೋಡುವುದಿಲ್ಲ. ಆದರೇ ಆತನ ಬಳಿ ಎಲ್ಲವೂ ಬಂದಾಗ ಎಲ್ಲರೂ ಬರುತ್ತಾರೆ ಎಂಬಂತೆ ಇಲ್ಲಿ ಅವಲಂಬನೆ ಇಲ್ಲದ ಬದುಕು ಸುಂದರವಾಗಿತ್ತದೆ. ನಾವು ಅವಲಂಬಿಸಿದರೇ ಅವರು ಖಾಲಿಯಾದಾಗ ನಾವು ಖಾಲಿಯಾಗುತ್ತೇವೆ. ಹಾಗಾಗಿ ಅವಲಂಬನೆ ಇಲ್ಲದ ಬದುಕು ಸುಂದರ ಸುಮಧುರ.
ಆಕಾಂಕ್ಷೆ: ನಾನು ಡಾಕ್ಟರ್ ಆಗಬೇಕು. ನಾನು ಇಂಜಿನಿಯರ್. ಮೇಷ್ಟ್ರು. ಗುತ್ತಿಗೆದಾರ. ಪೋಲಿಸ್ ಆಗಬೇಕು ಹೀಗೆ ಎಲ್ಲರೂ ನಾನೇನು ಆಗಬೇಕು ಎಂಬ ಆಕ್ಷಾಂಕ್ಷೆಯನ್ನು ಹೊಂದಿರುತ್ತಾರೆ ಹಾಗೆ ಮೊದಲು ನಾನು ಉತ್ತಮ ನಾಗರಿಕನಾಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಬೇಕಲ್ಲವೆ. ಹಾಗಾಗಿ ಇಲ್ಲಿ ನಮ್ಮಲ್ಲಿ ಗಗನದೆತ್ತರಕ್ಕೆ ಇರುವ ಕನಸುಗಳಲ್ಲಿ ಆಕಾಂಕ್ಷೆಗಳು ಇರುತ್ತವೆ. ಹುಡುಗಿಯರು ನಾನು ಶ್ರೀಮಂತ ಕುಟುಂಬದ ಸೊಸೆಯಾಗಬೇಕು ಎಂದು ಅಂದುಕೊಳ್ಳುತ್ತಾರೆ. ಅದೇ ರೀತಿ ನಾನು ನಮ್ಮ ಹುಟ್ಟೂರಿನಲ್ಲಿ ಒಂದು ಸುಂದರ ಮನೆ ಕಟ್ಟಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ. ಹೀಗೆ ನಾನಾ ಆಕಾಂಕ್ಷೆಗಳನ್ನು ಅವರವ ಭಾವಕ್ಕೆ ತಕ್ಕಂತೆ ಹೊಂದಿರುತ್ತಾರೆ. ಬದುಕು ಸುಂದರವಾಗಿರಲು ಸಹಜವಾಗಿ ಆಕಾಂಕ್ಷೆಗಳು ಅತ್ಯವಶ್ಯ ಏಕೆಂದರೆ ಬದುಕಿನಲ್ಲಿ ಆಕಾಂಕ್ಷೆಗಳಿರಬೇಕು. ಆಕಾಂಕ್ಷೆಗಳು ಈಡೇರಬೇಕು ಆಕಾಂಕ್ಷೆಗಳಿದ್ದರೇ ಬದುಕು ಸುಂದರ ಸುಮಧುರ.
ಸಹಜತೆ : ಬದುಕಿನಲ್ಲಿ ಮನುಷ್ಯನಿಗೆ ಸಹಜತೆ ಇರಬೇಕು. ನಾನಂತು ತುಂಬಾ ಸಹಜವಾಗಿರಬೇಕೆಂದು ಬಯಸುವವನು. ಕೆಲವರು ಅವರಲ್ಲಿ ಇಲ್ಲದನ್ನ ಇದೆ ಎಂದು ತೋರಿಸುತ್ತಾರೆ. ಕೆಲವರು ಸಹಜತೆಯನ್ನು ಬದಿಗೊತ್ತಿ ಕೃತಕವಾಗಿ ಮಾತನಾಡುತ್ತಾರೆ. ತಮ್ಮ ದಿನ ನಿತ್ಯದ ಸಹಜತೆ ಬಿಟ್ಟು ಏನೆನೋ ಇದೆ ಎಂಬಂತೆ ತೋರ‌್ಪಡಿಸುತ್ತಾರೆ. ಇಲ್ಲಿ ಸಹಜತೆ ಅತೀ ಮುಖ್ಯ ಪ್ರೀತಿಸುವ ಗುಣ ಸಹಜವಾಗಿರಬೇಕು. ಗೆಳೆತನದ ಗುಣ ಸಹಜವಾಗಿರಬೇಕು ಆದರೇ ಅದು ಕೃತಕವಾಗಿರಬಾರದು. ಬೇರೆವರಿಗೆ ಇದು ಇವರದ್ದಲ್ಲ ಎನ್ನುವುದು ನೋಡುತ್ತಲೇ ತಿಳಿಯುತ್ತದೆ ಹಾಗಾಗಿ ಸಹಜತೆ ಇದ್ದರೇ ಬದುಕು ಸುಂದರ ಸುಮಧುರ.
ಸಿದ್ದತೆ : ನಾವು ಯಾವುದೇ ಕೆಲಸ ಮಾಡಲಿ, ಕೆಲಸ ಮಾಡಲು ಸನ್ನದ್ದರಾಗಲಿ ಅಲ್ಲಿ ಸಿದ್ದತೆ ಇದ್ದೆ ಇರುತ್ತದೆ. ಬದುಕಿನಲ್ಲಿ ಸಿದ್ದತೆ ಇರಬೇಕು. ಮದುವೆಯಾಗಬೇಕೆಂದರೇ ಅಲ್ಲಿ ಗಂಡಿಗೆ ಹೆಣ್ಣು. ಹೆಣ್ಣಿಗೆ ಗಂಡು ಸಿದ್ದವಾಗಿರಬೇಕು. ಅಲ್ಲದೆ ಸ್ವಲ್ಪವಾದರೂ ಅಲ್ಲಿ ಸಿದ್ದತೆಯನ್ನೂ ಮಾಡಿಕೊಳ್ಳದಿದ್ದರೇ ಬದುಕನ್ನು ಸುಂದರವನ್ನಾಗಿಸುವುದಾದರೂ ಹೇಗೆ. ಹಾಗಾಗಿ ಬದುಕು ಸುಂದರವಾಗಿರಬೇಕೆಂದರೇ ಸಿದ್ದರೆ ಅತ್ಯಗತ್ಯ ಎಂಬುದು ಮಾತ್ರ ಸತ್ಯ.
ವಿವೇಚನೆ : ವಿವೇಚನೆ ಎಂಬುದು ವಿಶಾಲತೆಯನ್ನು ತೋರಿಸುತ್ತದೆ. ವಿಶಾಲತೆಯು ಇಲ್ಲಿ ಎಲ್ಲವನ್ನು ಒಳಗೊಂಡಿದೆ ಏಕೆಂದರೆ ವಿವೇಚನೆಯಿಂದ ನಾವು ವರ್ತಿಸಿದಾಗ ಮಾತ್ರ ನಾವು ಬದುಕಿನಲ್ಲಿ ಗೆಲುವು ಸಾಧಿಸಲು ಸಾದ್ಯ. ವಿವೇಚನೆಯಿಂದ ಹೆಜ್ಜೆ ಇಟ್ಟರೇ ಮಾತ್ರ ಬದುಕನ್ನು ಸುಂದರವಾಗಿಸಬಹುದು. ವಿವೇಚನೆ ಇಲ್ಲದೇ ನಾವು ದುಡುಕಿ ಏನನ್ನಾದರೂ ಮಾಡಿಕೊಂಡಲ್ಲಿ ಬದುಕು ಬರ್ಬತ್‌ಆಗಿಹೋಗುತ್ತದೆ. ಹಾಗಾಗಿ ನಮ್ಮಲ್ಲಿ ವಿವೇಚನೆ ಇದ್ದರೇ ಬದುಕು ಸುಂದರ ಸುಮಧುರ.
ಮೌನ : ಮಾತು ಬೆಳ್ಳಿ ಮೌನ ಬಂಗಾರ ಎಂಬ ಗಾದೆ ಮಾತಿದೆ. ಬದುಕಿನಲ್ಲಿ ಮಾತೇ ಮುಖ್ಯವಲ್ಲ. ಮೌನವೂ ಅತೀ ಮುಖ್ಯ. ಮಾತೆಂಬುದು ಜೋರ್ತಿಲಿಂಗ ಅನ್ನುತ್ತಾರೆ. ಆದರೇ ಕೆಲವು ವೇಳೆ ಮಾತೇ ಮೃತ್ಯುವಾಗಿ ಬಿಡುತ್ತದೆ. ಬದುಕಿನಲ್ಲಿ ಮಾತನಾಡಿ ಸೋಲುವುದಕ್ಕಿಂತ ಮೌನವಾಗಿದ್ದುಕೊಂಡು ಗೆಲ್ಲಬೇಕು. ಮಾತನ್ನು ಮೌನದಿಂದಲೇ ಸೋಲಿಸಬಹುದು. ಕೆಲವೊಮ್ಮೆ ಮಾತುಗಳು ನಮ್ಮ ಜೀವಕ್ಕೆ ಅಪಾಯ ತರುತ್ತವೆ. ಆದರೆ ಮೌನ ಜೀವನ್ನು ಉಳಿಸುತ್ತದೆ. ಅದು ಹೇಗೆ ಎಂದು ಚಿಂತಿಸುವಿರಾ. ಅಪಾಯಗಳು ಎದುರಾದಾಗ ನೀವು ಮಾತನಾಡಿ ನೋಡಿ ..ಇಲ್ಲಾ ಮೌನವಾಗಿದ್ದು ನೋಡಿ ಯಾವುದು ದೊಡ್ಡದು ಎಂಬುದು ಹಾಗಾಗಿ ನನ್ನ ಪ್ರಕಾರ ಮೌನವಾಗಿದ್ದರೇ ಬದುಕು ಸುಂದರ ಸುಮಧುರ.
ವರ್ತನೆ: ಬದುಕು ಅಂದರೆ ಅಲ್ಲಿ ಎಲ್ಲವೂ ಇರುತ್ತದೆ. ನಾವು ಇನ್ನೊಬ್ಬರ ಜೊತೆಯಾವ ರೀತಿ ವರ್ತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾನೇ ಕೆಲವೊಮ್ಮೆ. ಸಿಟ್ಟಿನಿಂದ ವರ್ತಿಸುತ್ತೇನೆ. ಕೆಲವೊಮ್ಮೆ ಶಾಂತಿಯಿಂದಲೇ ಗೆಲ್ಲುತ್ತೇನೆ. ಬದುಕು ಸುಂದರವಾಗಲು ನಾಯಕತ್ವವೂ ಬೇಕು. ಸೇವಕತ್ವವೂ ಇರಬೇಕು ಇಲ್ಲಿ ಪ್ರತಿಕ್ಷಣದಲ್ಲಿಯೂ ವರ್ತನೆ ಕ್ರೀಯಾಶೀಲವಾಗಿರುತ್ತದೆ. ಅಲ್ಲದೆ ನಮ್ಮ ವರ್ತನೆ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇಲ್ಲಾ ಕೆಲವು ವೇಳೆ ಆ ಸಂದರ್ಭದಲ್ಲಿ ನಿಮ್ಮ ವರ್ತನೆ ಕೆಲವರಿಗೆ ಕಿರಿ ಕಿರಿ ತರಬಹುದು ಆದರೇ ನೀವು ಒಳ್ಳೆಯವರೇ ಆಗಿರುತ್ತೀರಿ ಆದರೇ ಅಲ್ಲಿ ನಮ್ಮ ವರ್ತನೆಗಳು ಬೇಸರಿಸುತ್ತವೆ. ಹಾಗಾಗಿ ವರ್ತನೆಗಳು ನಮ್ಮ ಹಿಡಿತದಲ್ಲಿದ್ದರೇ ಬದುಕು ಸುಂದರ ಸುಮಧುರ.
ಅಹಂ: ಮನುಷ್ಯನಲ್ಲಿ ಇಂದು ಅಹಂ ಎಂಬುದು ತನ್ನೊಂದಿಗೆ ಸದಾ ಇರುತ್ತದೆ. ಅದನ್ನು ತೊಡೆದು ಹಾಕಿದಾಗ ಮಾತ್ರ ನಾವು ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಉದಾಹರಣೆಗೆ ಒಬ್ಬ ಶ್ರೀಮಂತನ ಮಗನೋ ಮಗಳೋ ಮದುವೆಯಾಗುವಾಗ ಅವನು ಬೇರೆಯವರನ್ನು ಗುರಿಯಾಗಿಸಿಕೊಂಡೆ ವಿವಾಹವಾಗುವುದು. ಅದು ಅನೇಕರಿಗೆ ಇರಿಸು ಮುರಿಸು ಉಂಟು ಮಾಡುತ್ತದೆ ಅಲ್ಲದೆ ಅವರೊಟ್ಟಿಗೆ ಇರುವ ವೇಳೆಯೂ ಅವರನ್ನು ಹಿಂಸೆಗೀಡು ಮಾಡುತ್ತದೆ. ಹಾಗಾಗಿ ಅಹಂ ಎಂಬುದನ್ನು ತೊಡೆದು ಹಾಕೋಣ ಅಲ್ಲದೆ ಅದು ಎಂದೂ ನಮ್ಮ ಬಳಿ ಸುಳಿಯದಂತೆ ನೋಡಿಕೊಂಡರೇ ಬದುಕು ಸುಂದರ ಸುಮಧುರ.
ಅಚ್ಚುಕಟ್ಟುತನ: ನಮ್ಮ ಬದುಕಿನಲ್ಲಿ ಯಾವುದೇ ಕೆಲಸ ಮಾಡಿದರು ಅದು ಅಚ್ಚು ಕಟ್ಟಾಗಿ ಇರಬೇಕು. ಅದು ಎಲ್ಲರು ನಿಂತು ಗೌರವಿಸುವಂತೆ ಇರಬೇಕು. ಮಾನವನ ಜೀವಿತಾವಧಿಯಲ್ಲಿ ಎಲ್ಲವನ್ನು ಗೆಲ್ಲಬಲ್ಲ ಶಕ್ತಿ ಅಡಗಿರುತ್ತದೆ. ಇಲ್ಲಿ ಗೆಲುವನ್ನು ಗೆಲುವಾಗಿ ನೋಡುವ ಆಸೆ ಇರಬೇಕಾದರೇ ಕೆಲಸದಲ್ಲಿ, ಮಾತಲ್ಲಿ, ನಡೆ ನುಡಿಯಲ್ಲಿ ಅಚ್ಚುಕಟ್ಟುತನ ವಿರಬೇಕು. ನಾವೆಲ್ಲರೂ ಜಗದ ಜೊತೆಗೆ ಬದುಕುತ್ತಿರುವುದರಿಂದ ಅಚ್ಚುಕಟ್ಟುತನವನ್ನು ಪಾಲಿಸೋಣ ಅಚ್ಚುಕಟ್ಟುತನ ನಮ್ಮಲ್ಲಿ ಇದ್ದರೇನ ಬದುಕು ಸುಂದರ ಸುಮಧುರ.
ಸಮಯ ಪಾಲನೆ: ನಾವು ಸದಾಕಾಲವು ಸಮಯದ ಜೊತೆಗೆ ಬದುಕುಸಾಗಿಸುವಂತಾಗಿದೆ. ಸಮಯವು ನಮ್ಮನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದೆ. ನಾವು ಗಡಿಯಾರದೊಂದಿಗೆ ಓಡುತ್ತಿದ್ದೇವೆ. ಗಡಿಯಾರವೇ ನಮ್ಮನ್ನು ತನಗೆ ಹೇಗ ಬೇಕೋ ಹಾಗೆ ನಿಯಂತ್ರಿಸುವ ಶಕ್ತಿ ಪಡೆದಿದೆ. ಬೆಳಗ್ಗೆ ಏಳುವಾಗಲು ನಾವು ಸಮಯವನ್ನು ನೋಡಿಕೊಂಡೇ ಏಳುತ್ತೇವೆ, ತಿಂಡಿ ಊಟ, ಸ್ನಾನ, ಡ್ಯೂಟಿ ಎಲ್ಲವೂ ಸಮಯದಂತೆ ಆಗುತ್ತಿದೆ. ಆದರೇ ಕೆಲವೊಮ್ಮೆ ಸಮಯ ಪಾಲನೆ ಮಾಡದೆ ನಾವು ಇರುತ್ತೇವೆ ರಾತ್ರಿ ಯಾವಾಗಲೋ ಮಲಗುವುದು. ಬೆಳಗ್ಗೆ ಸೂರ್ಯ ಹುಟ್ಟಿದ ಮೇಲೆ ಏಳುವುದು ಒಟ್ಟು ಸಮಯ ಪಾಲನೆಯನ್ನು ರೂಢಿಸಿಕೊಳ್ಳೋಣ. ಸಮಯ ಪಾಲನೆ ಮಾಡಿದರೇ ಬದುಕು ಸುಂದರ ಸುಮಧುರ.
ಹೀಗೆ ಎಲ್ಲವನ್ನು ನಾವಂದು ಕೊಂಡತೆ ಮಾಡಿದರೇ ಬದುಕು ಸುಂದರ ಸುಮಧುರವಾಗಿರುತ್ತದೆ. ಬನ್ನಿ ಇಂದಿನಿಂದ ನಮ್ಮ ಬದುಕನ್ನ ನಾವೇ ರೂಪಿಸಿಕೊಳ್ಳೋಣ. ಎಲ್ಲರಿಗಿಂತ ಮಾದರಿಯಾಗಿ ಬದುಕೋಣ.
ವಂದನೆಗಳೊಂದಿಗೆ
ಮಾಲತೇಶ್ ಅರಸ್ ಹರ್ತಿಮಠ, ಪತ್ರಕರ್ತರು.
ವಿಜಯವಾಣಿ. ಬೆಂಗಳೂರು 9480472030