Thursday, November 6, 2014

ಬಿಡದಿಯಲ್ಲಿ ಸಂಭ್ರಮದ ಕನ್ನಡ ನುಡಿ ಹಬ್ಬ:ಮಾಲತೇಶ್ ಅರಸ್ _Malathesh Urs



 ಜಾನಪದ ಕಲಾವಿದರ ಜನಗಣತಿಯಾಗಬೇಕು: ಡಾ.ಎಸ್ ಬಾಲಾಜಿ ಒತ್ತಾಯ

 * ಕಾಲೇಜಿನಲ್ಲಿ ಅರಳಿದ ಕನ್ನಡದ ಹಬ್ಬ   * ಸಾಂಸ್ಕೃತಿಕ, ಜಾನಪದ ಗೀತಗಾಯನ
 * ದಾನಿಗಳಿಗೆ, ಸಾಧಕರಿಗೆ  ಸನ್ಮಾನ           * ವೈಭವದ ಉತ್ಸವಕ್ಕೆ ವಿದ್ಯಾರ್ಥಿಗಳು ಸಾಥ್








 ಬಿಡದಿ: ಅಲ್ಲಿ ನಲಿವು, ಸಂಭ್ರಮ, ಕುಣಿತ, ಕೇಕೆ, ನಗುವಿತ್ತು, ಜಾನಪದ ಗೀತೆ, ತತ್ವಪದ, ಕೋಲಾಟ ಪದಗಳ ಹಬ್ಬ ಬಿತ್ತು, ವಿದ್ಯಾರ್ಥಿಗಳ ಮಾತೂ ಇತ್ತು,  ಅಜ್ಜಿ ಹಾಡಿದ ಸೋಬಾನೆ ಹಾಡುಗಳ ಊಟ, ಕಲಾವಿದ ನಲಿದಾಟ, ಪ್ರಾಚಾರ್ಯರ ಏಕಪಾತ್ರಾಭಿನಯ, ಉಪನ್ಯಾಸಕರ ಉಲ್ಲಾಸ, ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡು, ಸೀರೆತೊಟ್ಟ ವಿದ್ಯಾರ್ಥಿನಿಯರು. ಕನ್ನಡಾಂಬೆಗೆ ಪುಷ್ಪನಮನ. ದಾನಿಗಳಿಗೆ, ಸಾಧಕರಿಗೆ ಸನ್ಮಾನ. ನಾಡಗೀತೆ ಬೆನ್ನಲ್ಲೇ ಈ ನಾಡಿನ ಎಲ್ಲಾ ಸಂಸ್ಕೃತಿಗಳಿಗೂ ಚೈತನ್ಯ ತುಂಬುವ ಮೂಲ ಕೃಷಿ ಸಂಸ್ಕೃತಿಗೆ ನಮಿಸುವ ರೈತಗೀತೆ ಮೊಳಗಿತು. ಜತೆಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಕುರಿತ ಭಾಷಣವೂ ಇತ್ತು.
       ಹೌದು ಅದು ಕನ್ನಡ ನುಡಿ ಹಬ್ಬ, ಸಂತೋಷದ ಹಬ್ಬ, ವಿದ್ಯಾರ್ಥಿಗಳು, ಉಪನ್ಯಾಸಕರು, ಕಲಾವಿದರು, ಹಾಡುಗಾರರು, ಸಾಧಕರು, ದಾನಿಗಳು ಮಕ್ಕಳೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಿದ ಹಬ್ಬ.
 ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಾತೃಭೂಮಿ ಯುವಕರ ಸಂಘ, ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 59ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನುಡಿ ಹಬ್ಬ ನಿಜಕ್ಕೂ ಅರ್ಥ ಪೂರ್ಣವಾಗಿತ್ತು. ಪ್ರತಿಭಾನ್ವಿತ ಕಲಾವಿದರ  ಹಾಡುಗಳ ಬಂಡಿ ಎಲ್ಲರೂ ಚಪ್ಪಾಳೆಯ ಮಳೆಗೈದರು.
           ಕನ್ನಡ ನುಡಿ ಹಬ್ಬವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಸಂಚಾಲಕ ಡಾ. ಎಸ್. ಬಾಲಾಜಿ ಮಾತನಾಡಿ,  ಕನ್ನಡ ಹಬ್ಬ ಕೇವಲ ನವೆಂಬರ್‌ಗೆ ಸೀಮಿತವಾಗಿದೆ ಇದು 365 ದಿನವೂ ನಡೆಯಬೇಕು. ಕಲೆ ಎಲ್ಲರನ್ನೂ ಕೈ  ಬೀಸಿ ಕರೆಯುತ್ತದೆ. ನೀವೂ ಕಲಾವಿದರಾಗಬೇಕು ಎಂದರು  ಸರ್ಕಾರ ಜಾತಿ ಗಣತಿಯಂತೆ ಪ್ರಮುಖವಾಗಿ ಜಾನಪದ ಕಲಾವಿದರ ಜನಗಣತಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
 ನಮ್ಮ ಪರಿಷತ್ತಿನ ಮಾತೃಭೂಮಿ ಯುವಕ ಸಂಘದ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರಿ ಮುಟ್ಟಿದ್ದಾರೆ. ನಿಮಗೂ ಅವಕಾಶ ನೀಡುತ್ತೇವೆ ನೀವು ಜಾನಪದದ ಮತ್ತು ಕನ್ನಡ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಎಂದು ಕರೆ  ನೀಡಿದರು.
            ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯವಾಣಿ ಹಿರಿಯ ಉಪ ಸಂಪಾದಕ ಮಾಲತೇಶ್ ಅರಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಬೇಕು. ಹೊಸತನದ ಪ್ಯಾಷನ್‌ಗೆ ಮಾರುಹೋಗಿ ನಾವು ನಮ್ಮಲ್ಲಿ ಹುದುಗಿರು ಸುಪ್ತ ಪ್ರತಿಭೆಯನ್ನು ಹೊರಹಾಕದೇ  ದೂರ ಉಳಿದಿದ್ದೇವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯಿಕ, ಸಾಂಸ್ಕೃತಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
          ಇಂದು ಮಾಲ್ ಸಂಸ್ಕೃತಿ ಬಂದು ನಮ್ಮೂರ ಸಂತೆಗಳೇ ಮಾಯವಾಗುತ್ತಿವೆ. ಕ್ರಾಪ್ಟ್ ಟೀಚರ್, ದೈಹಿಕ ಶಿಕ್ಷಕರಂತೆ ಸಾಂಸ್ಕೃತಿಕ ಅಧ್ಯಾಪಕರ ಅವಶ್ಯತೆ ಇದೆ. ದೃಶ್ಯ ಮಾಧ್ಯಮದ ಹಿಂದೆ ಹೋಗುವ ಇಂದಿನ ಯುವ ಪೀಳಿಗೆ ಪತ್ರಿಕೆಗಳನ್ನು ಅಧ್ಯಯನ ಮಾಡಿ ಜ್ಞಾನ ವೃದ್ದಿಸಿಕೊಳ್ಳಬೇಕು.  ಕನ್ನಡ- ಕನ್ನಡಿಗ- ಕರ್ನಾಟಕ ಎಂಬುದನ್ನು ನಾವು ಪಾಲಿಸಿದರೇ ಮಾತ್ರ ರಾಜ್ಯೋತ್ಸವಕ್ಕೆ ಒಂದು ಅರ್ಥ ಎಂದರು.
           ರಾಜ್ಯದಲ್ಲಿ ಐಎಎಸ್ ಮತ್ತು ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಆಡಳಿತದಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
             ಅತಿಥಿಯಾಗಿ ರಾಮನಗರ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯೇ ಕನಕ ತಾರಾ ಮಾತನಾಡಿ, ಕನ್ನಡ ನಾಡಿನಲ್ಲಿ ಅನೇಕರು ಐತಿಹಾಸಿಕ ಪುರುಷರಿದ್ದಾರೆ. ಅದನ್ನೆಲ್ಲಾ ನಾವು ತಿಳಿದುಕೊಳ್ಳಬೇಕು.ನಾವು ಇತಿಹಾಸನ್ನು ತಿಳಿದರೇ ಕನ್ನಡದ ಶಕ್ತಿ ತಿಳಿಯುತ್ತದೆ. ಕನ್ನಡದ ಹಬ್ಬದಲ್ಲಿ ಕೇವಲ ಸಂಭ್ರಮವಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅನುಕೂಲವಾಗುತ್ತಿದೆ ಎಂದರು. ಜಾನಪದ ಕಲಾವಿದ ಈ ಹಾಡುಗಳನ್ನು ಕೇಳುತ್ತಿದ್ದರೇ ನಾಶವಾಗುತ್ತಿವೆ ಎಂದು ಕೆಲವರು ಹೇಳುವ ಮಾತು ಸುಳ್ಳು ಎನಿಸುತ್ತಿದೆ. ನಮ್ಮನ್ನು ನಾವು ಪ್ರೀತಿಸುವಂತೆ ಕನ್ನಡವನ್ನು ನಾವು ಪ್ರೀತಿಸಬೇಕು,ಆರಾಧಿಸಬೇಕು ಎಂದರು.
                ಬಿಡದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೊಡ್ಡರಸಿನಕೆರೆ ಮಾಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಅಮೆರಿಕಾದಲ್ಲಿರುವ ಹೆಚ್ಚು ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್‌ಗಳು ಭಾರತದವರು ಎಂಬುದನ್ನು ಮರೆಯಬಾರದು. ಅದರಲ್ಲಿ ಕನ್ನಡಿಗರೇ ಹೆಚ್ಚು, ಕರ್ನಾಟಕವನ್ನು ತುಂಡು ಮಾಡುವ ಮಾತುಗಳನ್ನಾಡು ಕೆಲವರಿಗೆ ಕಡಿವಾಣ ಹಾಕಬೇಕು. ಎನ್ನುತ್ತಲೇ ಮಯೂರ ವರ್ಮಾರ ಏಕಪಾತ್ರಾಭಿನಯದ ಸಂಭಾಷಣೆಯನ್ನು ಹೇಳಿ ಎಲ್ಲರೂ ದಂಗಾಗುವಂತೆ ಮಾಡಿದರು.
                 ಮಾತೃಭೂಮಿ ಯುವಕರ ಸಂಘದ ಮತ್ತು ಜಾನಪದ ಪರಿಷತ್ತಿನ ಕಲಾವಿದರರಿಂದ ಹಾಡುಗಳು ಮೇಳೈಸಿದವು. ಸುಗ್ಗಿ ಸಿರಿಯ ಕುಣಿತ, ಶ್ರಮ ಸಂಸ್ಕೃತಿಯ ಗೀತೆ, ಜನಪದ ಹಾಡುಗಳು, ಸೋಲಿಗರ ಸಂಸ್ಕೃತಿಯ ಗೀತೆಗಳು, ತಮಟೆ ಸೇರಿ ವಿವಿಧ  ಪರಿಕರಗಳ ಸದ್ದು  ಕಾಲೇಜು ಆವರಣವನ್ನು ರಂಗಾಗಿಸಿತು.
              ಇದೇ ವೇಳೆ ಜಾನಪದ ಗಾಯಕಿ ಸೋಬಾನೆ ಕೆಂಪಮ್ಮ, ವಂದೇಮಾತರಂ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್, ಜಾನಪದ ಪರಿಷತ್‌ನ ರಾಜ್ಯ ಸಂಚಾಲಕ ಡಾ.ಎಸ್.ಬಾಲಾಜಿ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪಕರಣ ದಾನ ನೀಡಿರುವ ಅಬ್ಬನಕುಪ್ಪೆಯ ಸಿ.ಲೋಕೇಶ್ ಮತ್ತು ಅಂಗಡಿ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
              ಅಂತರಾಷ್ಟ್ರೀಯ ಗಾಯಕ ಭೀಮಪ್ಪ ಕೆ.ಬೂದಿಹಾಳ್, ಸುಬ್ರಮಣಿ, ರಾಮು, ಅಜಿತ್, ರಘು, ತೂಬಿನಕೆರೆ ರಂಗಸ್ವಾಮಯ್ಯ, ಮಂಗಳಗೌರಿ ನೇತೃತ್ವದ ತಂಡಗಳು ಜಾನಪದ ಗೀತೆಗಾಯನ ಮತ್ತು ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಉಪನ್ಯಾಸಕರಾದ ಬಿ.ಎಂ.ಗಂಗಾಧರ್, ಜ್ಯೋತಿಲಕ್ಷ್ಮೀ ಹಿರೇಗೌಡ, ರಂಜನಿ ಇತರರು ಇದ್ದರು.

No comments:

Post a Comment