ಮಕ್ಕಳು ಸಾಂಸ್ಕೃತಿಕ ರಾಯಭಾರಿಗಳಾಗಬೇಕು
* ಭುವನೇಶ್ವರ ದೇವಿಗೆ ಪೂಜೆ * ಜಾನಪದ ಹಾಡುಗಳ ಗಾಯನ *ಮಕ್ಕಳು ನಾಡ ಕಣ್ಮಣಿಗಳಾಗಿ ಹೊರಹೊಮ್ಮಬೇಕು
ಹಿರಿಯೂರು : ಪ್ರತಿಯೊಬ್ಬ ಮಗುವೂ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಬೇಕು. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಹೊಸತನದ ಪ್ಯಾಷನ್‌ಗೆ ಮಾರುಹೋಗಿ ನಾವು ನಮ್ಮಲ್ಲಿ ಹುದುಗಿರು ಸುಪ್ತ ಪ್ರತಿಭೆಯನ್ನು ಹೊರಹಾಕದೇ ದೂರ ಉಳಿದಿದ್ದೇವೆ ಎಂದು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಸಕ್ಕರ ರಂಗಸ್ವಾಮಿ ಹೇಳಿದರು.
ಅವರು ಮಕ್ಕಳ ಗೆಳೆಯರ ಬಳಗ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಕ್ಕಳ ಹಬ್ಬ ಹಾಗೂ ಮಕ್ಕಳ ರಾಜ್ಯೋತ್ಸವದ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯೂರಿನಲ್ಲಿ ಪ್ರಥಮವಾಗಿ ಮಕ್ಕಳ ಹಬ್ಬ ಹಾಗೂ ಮಕ್ಕಳ ರಾಜ್ಯೋತ್ಸವವನ್ನಾಗಿ ಆಚರಿಸುತ್ತಿರುವುದು ಸಂಭ್ರಮದ ವಿಷಯ. ಈ ಮೂಲಕ ಮಕ್ಕಳ ಪ್ರತಿಭೆಗೆ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದರು.
ಚಲನಚಿತ್ರ ಸಾಹಿತಿ ಈಶ್ವರ್ ದಗ್ಗೆ ಮಾತನಾಡಿ, ನವೆಂಬರ್ ಎಂದ ಕೂಡಲೇ ಎಲ್ಲೆಡೆ ರಾಜ್ಯೋತ್ಸವ ಮಾಮೂಲಿ, ಆದರೆ ಮಕ್ಕಳೇ ನಡೆಸುವ ಈ ರಾಜ್ಯೋತ್ಸವ ಮಕ್ಕಳ ಹಬ್ಬ ನಿಜಕ್ಕೂ ಅರ್ಥಪೂರ್ಣ. ಇಂತಹ ಆಚರಣೆಗಳು ಎಲ್ಲೆಡೆ ನಡೆದಾಗ ಮಕ್ಕಳಲ್ಲಿ ನಾಡಿನ ಬಗ್ಗೆ ಆಸಕ್ತಿ ಹಾಗೂ ಅಭಿರುಚಿ ಮೂಡುತ್ತದೆ. ಅಲ್ಲದೆ ಮಕ್ಕಳು ನಾಡ ಸಂಸ್ಕೃತಿಯನ್ನು ಅಳವಡಿಕೊಳ್ಳಬೇಕು. ಮತ್ತು ನಾಡ ಕಣ್ಮಣಿಗಳಾಗಿ ಹೊರಹೊಮ್ಮಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಭಾರತ ರತ್ನ ಪ್ರಶಸ್ತಿ ಕರ್ನಾಟಕಕ್ಕೆ ಲಭಿಸಿರುವುದು ನಾವು ವಿಜ್ಞಾನದಲ್ಲಿ ಮುಂದಿದ್ದೇವೆ ಎಂಬುದಕ್ಕೆ ಸಾಕ್ಷಿ. ಅಮೆರಿಕಾದಲ್ಲಿರುವ ಹೆಚ್ಚು ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್‌ಗಳು ಭಾರತದವರು ಎಂಬುದನ್ನು ಮರೆಯಬಾರದು. ಇಲ್ಲಿ ಬಂದಿರುವ ಪ್ರತಿಯೊಬ್ಬ ಮಕ್ಕಳಲ್ಲೂ ವಿಶೇಷ ಶಕ್ತಿ ಅಡಗಿರುತ್ತದೆ. ಹೀಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಇಂದು ಹೆಚ್ಚು ಅಗತ್ಯವಾಗಿದೆ ಎಂದರು. ಅಲ್ಲದೆ ಜಾನಪದ ಹಾಡು ಹೇಳುವ ಮೂಲಕ ಎಲ್ಲರನ್ನೂ ರಂಜಿಸಿದರು.
ಪರಿಸರ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್ ಮಾತನಾಡಿ, ಕನ್ನಡ ನಾಡಿನಲ್ಲಿ ಅನೇಕರು ಐತಿಹಾಸಿಕ ಪುರುಷರಿದ್ದಾರೆ. ಅದನ್ನೆಲ್ಲಾ ನಾವು ತಿಳಿದುಕೊಳ್ಳಬೇಕು. ಇಂದು ಬೆಂಗಳೂರು ಸೇರಿದಂತೆ ಹಲವೆಡೆ ತಂದೆ - ತಾಯಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಮಕ್ಕಳಿಗೆ ಪೋಷಕರು ತಮ್ಮ ಜ್ಞಾನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಟ್ಯೂಷನ್‌ಗೆ ಮೊರೆಹೋಗುತ್ತಿರುವುದು ದುರಂತ. ಈ ಮಕ್ಕಳ ಹಬ್ಬದಲ್ಲಿ ಕೇವಲ ಸಂಭ್ರಮವಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅನುಕೂಲವಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪುರಸಭೆಯ ಮಾಜಿ ಅಧ್ಯಕ್ಷೆ ಮಂಜುಳ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹನುಮಂತರಾಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಹೆಗ್ಗಯ್ಯ, ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಂತರಾಜ್ ಹುಲಿ, ಹರ್ತಿಕೋಟೆ ಉಣ್ಣೆ ಕೈಮಗ್ಗ ನೇಕಾರ ಸಹಕಾರ ಸಂಘದ ಅಧ್ಯಕ್ಷ ಸಂಗೇನಹಳ್ಳಿ ಜೈ ಪ್ರಕಾಶ್, ಹಿರಿಯೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ. ಮಹಂತೇಶ್, ಹಾಲುಮತ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಲೀಲಾವತಿ ಮೈಲಾರಪ್ಪ, ಕಾರ್ಯದರ್ಶಿ ಬಿ.ಜೆ. ಶೃತಿ, ಶ್ರೀ ತೇರು ಮಲ್ಲೇಶ್ವರ ಯುವಕ ಸಂಘದ ಅಧ್ಯಕ್ಷ ಜಗದೀಶ್ ಭಂಡಾರಿ, ಮಕ್ಕಳ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಕಿರಣ್ ಮೀರಜ್ಕರ್, ಶ್ರೀ ಕೆಂಚಲಿಂಗೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕ ಮಂಜುನಾಥ್ ಹುಲಿ, ಮಾಜಿ ಸೈನಿಕ ಮಸ್ಕಲ್ ಮುದ್ದಲಿಂಗಪ್ಪ, ಹಿರಿಯ ಪತ್ರಕರ್ತ ರವೀಂದ್ರನಾಥ್, ಗಣಾಚಾರ್ ರಾಮಲಿಂಗಯ್ಯ ಉಪನ್ಯಾಸಕರಾದ ಎಂ.ಜಿ ರಂಗಸ್ವಾಮಿ, ವಂದೇಮಾತರಂ ಜಾಗೃತಿ ವೇದಿಕೆ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರಸನ್ನ ಹುಚ್ಚವ್ವನಹಳ್ಳಿ ಮತ್ತಿತರರಿದ್ದರು.
ಇದೇ ವೇಳೆ ವಿಖ್ಯಾತ್ ಅರಸ್ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಆಗಮಿಸಿದ್ದ ಎಲ್ಲಾ ಮಕ್ಕಳಿಗೂ ವಿಶೇಷ ಉಡುಗೊರೆಯನ್ನು ಗಣ್ಯರು ವಿತರಿಸಿದರು.
ಅಲ್ಲಿ ನಲಿವು, ಸಂಭ್ರಮ, ನಗುವಿತ್ತು, ಪಠ್ಯೇತರ ಚಟುವಟಿಕೆಗಳಿತ್ತು, ಜಾನಪದ ಹಾಡುಗಳ ಗಾಯನವಿತ್ತು, ಪುಟಾಣಿಗಳ ಮಾತೂ ಇತ್ತು, ಮಕ್ಕಳ ತುಂಟಾಟ, ಸವಿ ಸವಿಊಟ, ಪೋಷಕರ ಉಲ್ಲಾಸವೂ ಇತ್ತು, ಜತೆಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಜಾನಪದ ಹಾಡುಗಳ ಕುರಿತ ಭಾಷಣವೂ ಇತ್ತು. ನಿಜಕ್ಕೂ ಅರ್ಥ ಪೂರ್ಣವಾಗಿತ್ತು. ಹಿರಿಯರ ಮಾತುಗಳಿಗೆ ಮಕ್ಕಳೆಲ್ಲಾ ಖುಷಿಯಿಂದ ಚಪ್ಪಾಳೆಯ ಮಳೆಗೈದರು.
ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿದರು. ಪ್ರತಿಮಾ ವಂದಿಸಿದರು.
No comments:
Post a Comment