Monday, November 17, 2014

ಜಗಲಿ ಕಟ್ಟೆ : ‘‘ಯಡಿಯೂರಪ್ಪ ಭೀಷ್ಮ ಅಂತೆ ’’ - ಮಾಲತೇಶ್ ಅರಸ್ ಹರ್ತಿಮಠ



 ಪಾತ್ರವರ್ಗ: ಪುಕ್ಸಟ್ಟೆ ಪಟ್ರೆ,  ಸುಮ್ಕಿರಮ್ಮ, ಪರಮೇಸಿ.  ಶಂಭೋನಂದ ಸ್ವಾಮಿ,

 ‘‘ಯಡಿಯೂರಪ್ಪ ಭೀಷ್ಮ ಅಂತೆ ’’ 

 ಮಾಜಿ ಸಿಎಮ್ಮೂ ಯಡಿಯೂರಪ್ಪ ಅದ್ಯಾಕೋ ಇತ್ತಿತ್ಲಾಗೆ ಮಹಾಭಾರತ್ವ, ರಾಮಾಯಣ್ವ ನೆನಪಾಡ್ಕೋತಾವ್ರೇ ಕಣಲೇ ಪರಮೇಸಿ   ಅಂತ ಪುಕ್ಸಟ್ಟೆ ಪಟ್ರೆಯ ಕಿವಿವೂದಿದ.
 ಮೊನ್ನೆ  ತುಮಕೂರನಾಗೆ ನೇಕಾರರ ಸಮಾವೇಶದೊಳಗೆ ನಿಂತು  ಬಿಜೆಪಿ ಮೇಲೆ ಭಲೇ ಬ್ರಹ್ಮಾಸ್ತ್ರವ ಬಿಟ್ಟವ್ರೆ ಕಣಲೇ. ಅಬ್ಬಾಬ್ಬಾಬ್ಬ. ಅದೇನು ಸ್ಪೀಡು ಅಂತೀಯ, ಅದೇನು ಹುಮ್ಮಸ್ಸು ಅಂತೀಯ,  ಶಿಕಾರಿಪುರದಾಗಿ ನಿಂತು ಮಾತಾಡ್ತಾ ಇವ್ನೀ ಅಂತಾನೇ ತಿಳಕಂಡು  ಮಾತಾಡ್ತಾ ಮಾತಾಡ್ತಾ  ಚಕ್ರವ್ಯೆಹ ನುಗ್ಗಿ ವಾಪಾಸು ಬರದುಕೆ ಆಗ್ದಲೇ ಇರಾಕೆ. ನಾ ಅಭಿಮನ್ಯು ಅಲ್ಲಾ,  ನಾನು ನಾನು ನಾನು ಚಕ್ರವ್ಯೆಹವ ಮುರಿದು ಹೊರಗೆ ಬರೋ ತಾಕತ್ತಿರೋ ಅರ್ಜುನ  ಅಂತ ಬೊಬ್ಬಿಟ್ಟವ್ರೇ ಕಣಲೇ ಅಂದ.
 ಅದೇ ಸಮಯಕ್ಕೆ ಸುಮ್ಕಿರಮ್ಮ ಕೊಡ ಇಡ್ಕಂಡು  ನೀರಿಗೆ ಅಂತ ಬರ‌್ತಾ ಇದ್ಲು. ಯಡಿಯೂರಪ್ಪ ಅಂತ ಹೆಸರು ಕೇಳಿದ ಕೂಡಲೇ ಸುಮ್ಕಿರಮ್ಮ ಕೈಲಿ ಸುಮ್ಕಿರಕ್ಕೆ ಆಗ್‌ಲಿಲ್ಲಾ. ಏನ್ರೋ ಅದು  ಅಂದ್ಲು.  ಪಟ್ರೆ ಹಿಂಗಿಗೆ ಹಿಂಗಿಗೆ ಕಣಕ್ಕಾ ಅಂತ ಹೇಳ ತಡಾ  ಖುಷಿಯಾಗ್  ಬುಡದ.
 ಅಯ್ಯೋ ಅದಲ್ಲಾ ಕಣಕ್ಕಾ  ಇವತ್ತು  ಹಳೇ ಪತ್ರಕರ್ತ ಹೊಸ ಮಿನಿಸ್ಟ್ರು  ತಗಡು ಶಿವಣ್ಣಅಲ್ಲಾಲ್ಲಾ ಸೊಗಡು ಶಿವಣ್ಣ. ಮತ್ತೆ ಟಿವಿ ಐಕ್ಲು ಮೈಕ್ ಮುಂದೆ ನಿಂತು ಮಾತಾಡವ್ರೇ. ಏನತ್ತಾ ಅಂದ ಪರಮೇಸಿ.
 ಅದೇ ಕಣಲೇ ನಮ್ ಯಡಿಯೂರಪ್ಪ ಅರ್ಜುನ ಅಲ್ಲಾ ಅವ್ರ ಬೀಷ್ಮ ಅಂತ.
 ಅಲ್ಲಾಲ್ಲೇ, ಅತ್ಲಾಗೇ ಅಭಿಮನ್ಯು ಅಲ್ಲಾ ಅರ್ಜುನ ಅಂತಾರೆ. ಇತ್ಲಾಗೆ ಶಿವಣ್ಣ. ಅವ್ರ ಅರ್ಜುನ ಅಲ್ಲಾ ಭೀಷ್ಮ ಅಂತಾವ್ರೇ ಏನಲೇ ಇದು ಕಿತಾಪತಿ.  ಅಂದ ಪುಕ್ಸಟ್ಟೆ ಪಟ್ರೆ.
 ಇಷ್ಟಾತನಕ ಸುಮ್ಕಿದ್ದ ಸುಮ್ಕಿರಮ್ಮ ‘ಅದು ನಮ್ ಯಡಿಯೂರಪ್ಪಗೆ 40 ವರ್ಷಗಳಿಂದ ಸರ್ವಿಸ್ ಆಗದೇ ನೋಡು  ಅದಕ್ಕೆ ಸೀನಿಯರ‌್ರು. ಅಂತ ಶಿವಣ್ಣ ಭೀಷ್ಮ ಅಂತ ಹೇಳಿದಾರೆ ಅನ್ನಾದ.
 ಅಯ್ಯೋ ಸುಮ್ನಿರಲೇ ಪುಕ್ಸಟ್ಟೆ. ಶಿವಣ್ಣಾನು ಸುಮ್ಕೆ ಅಂದಿರಲ್ಲಾ. ಈ ಯಡಿಯೂರಪ್ಪ ತನಗೆ ಯಂಗೆ ಬೇಕೋ ಅಂದಾ  ಮಾತಾಡೋದನ್ನ ನೋಡಕ್ಕಾಗದೇ  ಮನಸ್ಸಲ್ಲಿ ಮೆಟ್ರೋ ರೈಲು ಓಡಾಡಿರುತ್ತೆ. ವಯಸ್ಸಾಗಿರೋ ಮುದುಕ ಭೀಷ್ಮಾ ಆಗ್ದಲೇ ಅರ್ಜುನನ ಆಗಾಕಾಗುತ್ತಾ ಅಂತ ಕಿಂಡಲ್ ಮಾಡಾವ್ರೆ ಕಣೇ ಸುಮ್ಕೀರಮ್ಮ ಅಂದ.
 ಹೌದೌದು. ಅರ್ಜುನುಗಾದ್ರೆ ಬತ್ತಳಿಕೆಯಲ್ಲಿ ನಾಲೈದು ಬಾಣಗಳಿರ‌್ತಾವೆ. ಭೀಷ್ಮಾ ಆದ್ರೆ ಬಾಣಗಳಾ ಹಾಸಿಗೇನೇ ಇರುತ್ತೆ. ಹೈ ಕಮಾಂಡ್ ಮೇಲೆ ಲೋ ಕಮಾಂಡ್ ಮೇಲೆ ದಿನಾಲು ಬಿಡಕ್ಕೆ ಸರಿಯೋಗಿತ್ತೆ ಅಂದ  ಪರಮೇಸಿ.
  ಅದೇ ಸಮಯಕ್ಕೆ ಸರಿಯಾಗಿ  ದಾರಿಲೀ ಶಂಭೋನಂದ ಸ್ವಾಮಿ ಹೋಕ್ತಾ ಇದ್ರು.  ಯಡಿಯೂರಪ್ಪ ಅಂತ ಕಿವಿಗೆ ಬಿದ್ ಕೂಡಲೇ  .. ನಮ್ಮ  ಶಂಬೋಮಠಕ್ಕೆ ಅವ್ರ 5 ಕೋಟಿ  ಅನುದಾನ ಕೊಟ್ಟಿದ್ರು. ಅದೇನೋ ಮಣ್ಣ ತಿನ್ನಕ್ಕೋಗಿ  ಸಿಗೆಬಿದ್ದು ಶಂಭೋ ಅಂದ್ರು ಪಾಪ ಅಂತ ರಾಗ ಏಳಿತಲೇ...
 ಇವಾಗ ಬಿಜೆಪಿ ಬಿಟ್ಟು ಅದೇನೋ ಕೆಜೆಪಿ ಅಂತ ಹಿಡಕಂಡವ್ರೆ. ಆ ಕೆಜೆಪಿ ಸಂಸ್ಥಾಪಕನೂ ಇಗಾಗ್ಲೇ  ಮುಂಡಾ ಮೋಚಿದಾನೇ ಅಂತಲೇ,  ಬಳ್ಳಾರಿ ರೆಡ್ಡಿ ಧಣಿಗಳನ್ನು ಹಿಡ್‌ಕಂಡು  ಅಧಿಕಾರಕ್ಕೆ ಬಂದ ಯಡ್ಡಿ ಇದೀಗ ಅದೇ ಬಳ್ಳಾರಿಯಲ್ಲೇ ಹಣ ನುಂಗಿರೋ ಕೆಜೆಪಿ ಹಿಡ್‌ಕಂಡ್ ಏನ್ ಮಾಡ್ತಾರೋ ಅಂತ ಮೆಲು ದನಿಯಲ್ಲಿಯೇ ಸುಮ್ಮನಾದ್ರು ಶಂಭೋನಂದ ಸ್ವಾಮಿ.
 ಅರೇ ಹೋಗಲೇ ಈ ಬಿಜೆಪಿ, ಕೆಜೆಪಿ ಅಂತ  ಇನ್ನ ಭಾಷಣವಾ ಕೇಳಕ್ಕೇ ಆಗಲ್ಲಾ ಅಲ್ಲಿ ದೆಲ್ಲಿಲಿ ಸೋನಿಯಾ ಮೇಡಂ  ಮಿನಿಸ್ಟುಗಳಿಗೆ ರಾಜೀನಾಮೆ ನೀಡಿ ಅಂತ ಹೇಳವ್ರೆ.  ಆಯಮ್ಮನ ಮಾತು ಅಂದ್ರೆ  ಅದಪ್ಪ ಖಡಕ್ ನಮ್ಮ ಎಸ್ಸೆಮ್ ಕೃಷ್ಣ ರಾಜೀನಾಮೆ ನೀಡಿ ಕನ್ನಡವೇ ನಮ್ಮಮ್ಮ. ಅವಳಿಗೆ  ಕೈ ಮುಗಿಯಮ್ಮ ಅಂತ ಮತ್ತೆ  ರಾಜ್ಯದಲ್ಲಿ ಕೈನ ಅಧಿಕಾರಕ್ಕೆ ತರ‌್ತೀನಿ ಅಂತ ಬಂದಾವ್ರೆ.
 ಅದೇನರಾ ಹೇಳಲೇ ಪುಕ್ಸಟ್ಟೆ.  ರಾಜಕೀಯ ಅಂದ್ರೆ  ಕೈದು. ಸಂಪುಟದಲ್ಲಿ ಹಿರಿಯರು. ಪಕ್ಷದಲ್ಲಿ ಕಿರಿಯರು. ಸಿದ್ರಾಮಯ್ಯ ಮನದೊಳಗಿರೋ ಸಾಮಾಜಿಕ ನ್ಯಾಯ ಆಗದೇ ಅಂತಾಲೋ ಅಂದ ಪರಮೇಸಿ.
 ಅರೇ ಕರೆಂಟ್ ಹೋತಲೇ...  ಆ ಶೋಭಕ್ಕ ದಿನಾಲೂ  ಸಂಜೆ ಹೊತ್ತಗೇ ಕಂರೆಂಟ್ ತಗೀತಳಲ್ಲೋ  ಪುಕ್ಸಟ್ಟೆ ಶೋಭಕ್ಕ ಯಾಂಕಂಗೆ ಮಾಡ್ತಾಳೋ. ಕೆಜೆಪಿಗೆ ಮಹಿಳಾ ಅಧ್ಯಕ್ಷೆ ಆಗ್‌ಬಿಟ್ಟು  ಸಾಯಾಬ್ರು ಜೊತೆಯಾಗೆ ರಾಜ್ಯ ಸುತ್ತಾ ಬಿಟ್ಟು ಇನ್ನು  ಬಿಜೆಪಿ ಅಲ್ಲೇ ಇದಾಳಪ್ಪ.  ಅಂತ ಕೊಡ ಹಿಡಕಂಡೇ ನಿಂತ ಸುಮ್ಕಿರಮ್ಮ ಹೇಳಿದ ಕೂಡಲೇ
  ಶಂಭೋನಂದ ಸ್ವಾಮಿ.. ಶಿವ ಶಿವ ನಾನ್ ಬರ‌್ತಿನಣ್ರಪ್ಪ ಅಂತ ಹೊರಟ ಬೆನ್ನಲ್ಲೆ......
 ಪುಕ್ಸಟ್ಟೆ ಪಟ್ರೆ ಕವಿಯಾದ
 ‘‘ಅಭಿಮನ್ಯು ಅಲ್ಲಾ ಅರ್ಜುನ ಅಂದರು
 ನಮ್ಮ ಮಾಜಿ ಸಿಮ್ಮು ಯಡ್ಡಿ
 ಕೆಜೆಪಿ ಬತ್ತಳಿಕೆಯಲಿ  ಇನ್ನೂ
 ಬಿಲ್ಲು ಇಲ್ಲಾ ಬಾಣವೂ ಇಲ್ಲ
 ಉಳಿಯೋದು ಊದಿನ ಕಡ್ಡಿ
 ಶಕ್ತಿ ಪ್ರದರ್ಶನಕ್ಕೆ ಸಿದ್ದವಾಗಿದೆ
 ರಾಜ್ಯದಲಿ ಕಾಂಗ್ರೇಸ್ಸು
 ಸಂಪುಟದಲ್ಲಿ ಹಿರಿಯರು.
 ಪಕ್ಷದಲ್ಲಿ ಕಿರಿಯರು
 ರಾಜ್ಯದಲ್ಲಿ  ಮಾಡ್‌ಬೇಕು
 ಬಿಜೆಪಿ, ಜೆಡಿಎಸ್ ಸರ್ಕಸ್ಸು ’’

 ಸೂಪರ್ ಕಣಲೇ ಪುಕ್ಸಟ್ಟೆ ಅಂತ ಸುಮ್ಕಿರಮ್ಮ ಎನ್ನುತ್ತಲೇ, ಚಪ್ಪಾಳೆ ತಟ್ಟಿದ ಪರಮೇಸಿ ಕರೆಂಟ್ ಬಂತು.  ಮೆಲ್ಲಗೆ ಜಗಲಿ ಕಟ್ಟೆ ಖಾಲಿಯಾಯ್ತು.
                                                                     
                                                                  -ಮಾಲತೇಶ್ ಅರಸ್ ಹರ್ತಿಮಠ
 







No comments:

Post a Comment