Friday, October 2, 2015

ಗಂಗಾವತಿ ನಗರದಲ್ಲಿ ಚರಂಡಿಗಳೇ ಧೋಬಿಘಾಟ್_ ಮಾಲತೇಶ್ ಅರಸ್



 ಗಂಗಾವತಿ ನಗರದಲ್ಲಿ ಚರಂಡಿಗಳೇ ಧೋಬಿಘಾಟ್

 * ಕೊಳಚೆ ನೀರಲ್ಲಿ ನಿತ್ಯ ಶುದ್ಧವಾಗುವ ಬಟ್ಟೆಗಳು
 * ಅಗಸರ ಗೋಳು ಕೇಳೋರೇ ಇಲ್ಲ
 * ಲಾಡ್ಜ್ , ಮನೆ ಬಟ್ಟೆಗಳಿಗೆ ಗಲೀಜು ನೀರೇ ಗತಿ
 * ಮಲ ಮೂತ್ರದಿಂದ ಗಬ್ಬು ನಾರುವ ಸ್ಥಳ
 * ಕೈ ಕಾಲುಗಳಲ್ಲಿ ಕಾಡುವ ಅಲರ್ಜಿ
 * ಗುಳ್ಳೆಗಳಾಗಿ ಅನಾರೋಗ್ಯ ಭೀತಿ
 * ಹಿಡಿಶಾಪ ಹಾಕುವ ಬಡ  ಜನತೆ

  ಮಾಲತೇಶ್ ಅರಸ್
 ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಹಿಂದ ವರ್ಗಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಗಂಗಾವತಿ ನಗರದಲ್ಲಿ  ಮಾತ್ರ ಬಟ್ಟೆ ತೊಳೆಯುವ ಮಡಿವಾಳರ (ಅಗಸರು) ಸ್ಥಿತಿ ಮಾತ್ರ ಶೋಚನೀಯವಾಗಿದೆ.
  ನಗರದಲ್ಲಿರುವ 25ಕ್ಕೂ ಅಧಿಕ ಲಾಡ್ಜ್ , ಆಸ್ಪತ್ರೆ ಹಾಗೂ ನೂರಾರು ಮನೆಗಳ ಬಟ್ಟೆಗಳು ಸ್ವಚ್ಛವಾಗುವುದು ಎಲ್ಲಿ ಎಂದು ನೀವು ತಿಳಿದುಕೊಂಡರೆ ಒಮ್ಮೆಲೆ ಅಚ್ಚರಿ ಪಡುತ್ತೀರಿ.
 ಹೌದು. ಗಂಗಾವತಿ ನಗರದ ಮಹಾವೀರ ಸರ್ಕಲ್‌ನಿಂದ ಕೊಪ್ಪಳ ರಸ್ತೆಗೆ ಬರುವಾಗ ಸಿಗುವ ಅರಿಹಂತ್ ಜೈನ್ ಕಾಲನಿ ಸಮೀಪದ ದೊಡ್ಡ ಚರಂಡಿಯ ಕೊಳಚೆ ನೀರಿನಲ್ಲಿ   ಬಟ್ಟೆಗಳು ಮಿಂದೆಳುವುದು.
 ರಾಜ್ಯದಲ್ಲಿ ಭತ್ತದನಾಡು ಎಂದೇ ಖ್ಯಾತಿಗಳಿಸಿರುವ ಗಂಗಾವತಿ ನಗರ ಅಭಿವೃದ್ಧಿಯಲ್ಲಿ ಇನ್ನೂ ಅಪಾರ ಹಿಂದುಳಿದಿದೆ ಎಂಬುದಕ್ಕೆ ಇಂದೊಂದು ಸಾಕ್ಷಿ ಸಾಕು.
 120 ಕುಟುಂಬಗಳು: ಗಂಗಾವತಿ ನಗರದಲ್ಲಿ ಅಗಸರ ಓಣಿ ಹಾಗೂ  ಮಹಬೂಬ್ ನಗರದಲ್ಲಿ  ಸುಮಾರು 120ಕ್ಕೂ ಅಧಿಕ ಮಡಿವಾಳರ ಕುಟುಂಬಗಳು ವಾಸಿಸುತ್ತಿದ್ದು, ಎಲ್ಲರೂ ಇದೇ ಕೊಳಚೆ ನೀರಲ್ಲಿ ಬಟ್ಟೆಗಳನ್ನು ತೊಳೆಯುತ್ತಾರೆ. ಮಡಿವಾಳರಲ್ಲದೆ ಉಳಿದ  ಬೇರೆ ಅನೇಕ ಕುಟುಂಬದ ಮಹಿಳೆಯರು ಇದೇ ನೀರನ್ನೇ ಬಟ್ಟೆ ತೋಳೆಯಲು ಆಶ್ರಯಿಸಿದ್ದಾರೆ.
 ತೆಲಿಪರಹಳ್ಳ: ಇದು ಮೊದಲು ಚರಂಡಿ ಮೋರಿಯಾಗಿರಲಿಲ್ಲ. ಬದಲಿಗೆ ಅನೇಕ ವರ್ಷಗಳಿಂದ ತೆಲಿಪರಹಳ್ಳ ಎಂದೇ  ಕರೆಯುತ್ತಿದ್ದಾರೆ. ಇಲ್ಲಿ ನೀರು ಬಿಟ್ಟಾಗ ಮಾತ್ರ ಅನುಕೂಲ. ಆದರೆ ಇದೀಗ ಇದೇ ತೆಲಿಪರಹಳ್ಳಿ ದಾಸನಹಾಳ್ ಕಾಲುವೆ  ಗಂಗಾವತಿಯ ಪ್ರಮುಖ ಚರಂಡಿ ನೀರು ಹರಿಯುವ ರಾಜಕಾಲುವೆಯಾಗಿದೆ.  ಇದೇ ಚರಂಡಿ ನೀರಿನಲ್ಲಿ   ಬಟ್ಟೆ ತೊಳೆಯುವ ಕಾಯಕವೂ ಸಾಗಿದೆ.
 ಧೋಬಿಘಾಟ್ ಕೊರತೆ :  ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ದೊಡ್ಡ ವಾಣಿಜ್ಯ ನಗರಿ. ಇಲ್ಲಿ  25ಕ್ಕೂ ಅಧಿಕ ಲಾಡ್ಜ್‌ಗಳು, ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂಗಳು ಹಾಗೂ  ನೂರಾರು ಕುಟುಂಬಗಳು ಬಟ್ಟೆ ತೊಳೆಯಲು  ಮಡಿವಾಳರನ್ನೇ  ಆಶ್ರಯಿಸಿದ್ದಾರೆ. ಆದರೆ   ಆಧುನಿಕ ತಂತ್ರಜ್ಞಾನಗಳು ಬಂದರೂ ಇಲ್ಲಿಗೆ ಮಾತ್ರ ಇನ್ನು  ಧೋಬಿಘಾಟ್ ಬಂದಿಲ್ಲ. ಇದು ಇಡೀ ಅಗಸರನ್ನು  ಕೆರಳಿಸಿದೆ. ಈ ಬಗ್ಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರೂ ಯಾವುದೂ ಈಡೇರಿಲ್ಲ.
 ನೀರಿನ ಸಮಸ್ಯೆ : ಪಕ್ಕದಲ್ಲಿಯೇ ಹೊಸಪೇಟೆ ತುಂಗಾಭದ್ರಾ ಡ್ಯಾಂ  ಇದ್ದರೂ ಗಂಗಾವತಿಯಲ್ಲಿ ನೀರಿಗೆ ಹಾಹಾಕಾರ ತಪ್ಪಿಲ್ಲ. ಕುಡಿಯವ ನೀರಿನ ಸಮಸ್ಯೆ ಒಂದೆಡೆಯಾದರೆ, ಇತ್ತ ಬಟ್ಟೆ ತೊಳೆಯುವ ಜನರಿಗೆ ನೀರಿಲ್ಲ.  ಅನೇಕ ಬಡ ಕುಟುಂಬಗಳಿಗೆ ಬಟ್ಟೆ ತೊಳೆಯಲು ಚರಂಡಿ ನೀರೇ ಆಶ್ರಯವಾಗಿದೆ.
 ಕಾಡುವ ಅನಾರೋಗ್ಯ: ಹೀಗೆ ಚರಂಡಿ ನೀರಿನಲ್ಲಿ  ಬಟ್ಟೆ ತೊಳೆಯುವ ಇವರ ಕೈ ಕಾಲುಗಳಲ್ಲಿ  ಗುಳ್ಳೆಗಳಾಗಿವೆ. ಉರಿಯಿಂದ ನಿತ್ಯವು ಕಾಡುವ ಅನಾರೋಗ್ಯ ಇವರನ್ನು ಕಂಗೆಡಿಸಿದ್ದರೂ ಬದುಕು ಸಾಗಿಸುವ ಅಸಹಾಯಕತೆಯಿಂದ ಕೆಲಸ ಮಾಡುವ ಅನಿವಾರ್ಯವೂ ಒದಗಿದೆ. 
 ಕೊಳಚೆ ನೀರನ್ನು ಶುದ್ಧಿಕರಣ ಮಾಡಿ ಬಳಸಬೇಕೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಗಂಗಾವತಿಗೆ ಮಾತ್ರ ಕೊಳಚೆ ನೀರೇ ಬಟ್ಟೆ  ತೊಳೆಯಲು ಆಧಾರವಾಗಿರುವುದು ದುರಂತ.

 ಬಾಕ್ಸ್...
 ಯಾವ್ಯಾವ ಬಟ್ಟೆ ..
 ಗಂಗಾವತಿ ನಗರದಲ್ಲಿರುವ ಲಾಡ್ಜ್‌ಗಳ ಹಾಸಿಗೆ  ಬೆಡ್‌ಸಿಟ್‌ಗಳು, ಟವಲ್‌ಗಳು, ಆಸ್ಪತ್ರೆಗಳ ಹಾಸಿಗೆ ಬಟ್ಟೆಗಳು, ಸಿನಿಮಾ ಟಾಕಿಸ್ ಸೀಟ್ ಕವರ್ ಹೀಗೆ ಎಲ್ಲವೂ ಇದೇ ಕೊಳಚೆ ನೀರಿನಿಂದಲೇ ಶುದ್ಧವಾಗುತ್ತಿವೆ. ಆದರೇ ಕೊಳಚೆ ನೀರಿನಿಂದಲೇ ಈ ಬಟ್ಟೆಗಳ ಕೊಳೆ ಹೋಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮಲ ಮೂತ್ರ, ಬೀದಿ ಗಲೀಜುಗಳನ್ನು ಹೊತ್ತ  ಈ ಚರಂಡಿ ನೀರು ಕೆಟ್ಟ ವಾಸನೆ ತರುತ್ತಿದ್ದರೂ ಮಹಿಳೆಯರು ಯಾವುದೇ ಬೇಸರವಿಲ್ಲದೆ ಇಲ್ಲಿ ಬಟ್ಟೆ ತೊಳೆಯುತ್ತಾರೆ. ಆದರೇ ಇಲ್ಲಿವರೆವೆಗೂ ಯಾರೂ ಈ ಅವ್ಯವಸ್ಥೆ  ಪ್ರಶ್ನಿಸಿಲ್ಲದಿರುವುದು ಮಾತ್ರ ಆಶ್ಚರ್ಯ.

 ಕೋಟ್..1

 ನಾವು ಸಣ್ಣರಿಂದ ಇದೇ ಕೆಲ್ಸಾ ಮಾಡ್ತಾ ಬಂದೀವ್ರೀ. ಈ ಪರಿ ದೊಡ್ಡ ಊರಾದ್ರೂ ಗಂಗಾವತಿಲಿ ಧೋಬಿಘಾಟ್ ಇಲ್ಲ. ನಮ್ ಅಗಸರ ಕಷ್ಟ ಕೇಳೋರೇ ಇಲ್ಲ. ಕೈ ಕಾಲು ಸಲಿತವಾ. ಸಣ್ ಸಣ್ ಗುಳ್ಳೆಗಳಾಗಿ ತೀಟೆ ಬರುತ್ರಿ. ವೋಟ್ ಹಾಕ್‌ಬೇಕಾದ್ರ ಮನಿಗೆ ಬರ‌್ತಾರ‌್ರೀ, ಬಂದ್ ಹೋತ್ನಾಗ ಧೋಬಿಘಾಟ್ ಮಾಡ್ತೀನಿ ಅಂದಾರು ಇತ್ತ ತಿರುಗಿ ನೋಡಿಲ್ರೀ.. ಇವರಿಗೆ  ಎಷ್ಟು  ಬೈದ್ರೂ ಅಷ್ಟೇರೀ.
  ಶಿವಮ್ಮ, ಹಿರಿಯ ಮಹಿಳೆ

 ಬಾಕ್ಸ್...
 ನಾಚಿಕೆಯಾಗಬೇಕು ...
 ಗಲೀಜು ನೀರಲ್ಲಿ ತೊಳೆಯಬೇಕು ಬಟ್ಟೆ : ತುಂಬಿಸಿಕೊಳ್ಳಬೇಕು ಹೊಟ್ಟೆ  ಎನ್ನುವ ಹೊಸ ಗಾದೆ ಗಂಗಾವತಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷೃ ಅಧಿಕಾರಿಗಳ ಬೇಜವಾಬ್ದಾರಿಗೆ  ಮಡಿವಾಳ ಸಮುದಾಯ ಹಾಗೂ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಮತ ಹಾಕಿಸಿ ಕೊಳ್ಳಲು ಮನೆ ಬಾಗಿಲಿಗೆ ಬರುವ ಮಂದಿ ಗೆದ್ದ ಮೇಲೆ ನಮ್ಮತ್ತ ಬರೋದೆ ಇಲ್ಲ ಥೂ.. ನಾಚಿಕೆಯಾಗಬೇಕು ಅವರ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.


  ರಾಜಪ್ಪ  9916392461



























No comments:

Post a Comment