Friday, October 2, 2015

ಹಾಲುಮತ ಸಮುದಾಯದ ಸಂಘಟನಾ ಕ್ರೀಡೆ ಟಗರುಗಳ ಕಾಳಗ... - ಮಾಲತೇಶ್ ಅರಸ್ ಹರ್ತಿಕೋಟೆ

ಹಾಲುಮತ ಸಮುದಾಯದ ಸಂಘಟನಾ ಕ್ರೀಡೆ
 ಟಗರುಗಳ ಕಾಳಗ...
 *ಟುರ್.......ಬ್ಯಾ....
 - ಮಾಲತೇಶ್ ಅರಸ್ ಹರ್ತಿಕೋಟೆ
 ಸುನಾಮಿ, ಬಂಡಿ, ಕಿಂಗ್ ಕೋಬ್ರಾ, ಮೈಲಾರಿ, ರಾಯಣ್ಣ, ಮದಕರಿ, ಪವರ್, ಥಂಡಾರ್, ಘಜನಿ, ವೀರ ಕನ್ನಡಿಗ, ದಾವಣಗೆರೆ ಟೈಗರ್, ದುರ್ಗದ ಹುಲಿ, ಪೈಟರ್ ಭದ್ರಾ, ಲೂಸ್‌ಮಾದ, ಸ್ಪಾಟ್, ಸೆವೆನ್ ಲಯನ್, ಕರಿಯ, ಸಿಡಿಲು ಮರಿ, ಕನಕ, ಕೆಂಗಾ, ಸುಪಾರಿ, ಸಿಂಹದ ಮರಿ, ಸೂಪರ್‌ಟೈಗರ್...
 ಅಬ್ಬಬ್ಬಾ... ಇದೇನು ಅಂಥಾ ಶಾಕ್ ಆಯ್ತ ಇವೆಲ್ಲಾ ಹೆಸರುಗಳು ಕಣ್ರೀ. ಜನರ ಹೆಸರಲ್ಲ ,ಬದಲಿಗೆ ಟಗರುಗಳ ಹೆಸರು. ರೇವಣಸಿದ್ದೇಶ್ವರ ಆರಾಧಕರು , ಮೈಲಾರಲಿಂಗೇಶ್ವರ, ಬೀರಲಿಂಗೇಶ್ವರ, ಮಾಳಿಂಗರಾಯ ಸೇರಿ ವಿವಿಧ ದೇವರುಗಳ ಭಕ್ತರಾದ ಕುರುಬರು ಸಾಕಿ ಕಾಳಗಕ್ಕೆ ಬಿಡುವ ಖದರ್ ಟಗರುಗಳ ಹೆಸರುಗಳು.  ಇಲ್ಲಿ ಟಗರುಗಳಿಗೆ ಟಗರುಗಳೇ ಸಾಟಿ.
 ಕ್ರೀಡೆಗಳು ನಾಡಿನ ಸಿರಿವಂತಿಕೆಗೆ ಸಾಕ್ಷಿ, ಇಲ್ಲಿನ ಪ್ರತಿಯೊಂದು ಆಟಗಳನ್ನು ಜನತೆ ಇಂದಿಗೂ ಪ್ರೀತಿಸುತ್ತಾರೆ. ದೇವರಂತೆ ಕ್ರೀಡೆಯನ್ನು ಆರಾಧಿಸುತ್ತಾರೆ. ಕನ್ನಡ ನಾಡಿನಲ್ಲಿ ಒಂದೊಂದು ಕ್ರೀಡೆಯೂ ಒಂದೊಂದು ಇತಿಹಾಸದ ನೆನಪನ್ನು ಹೊರಹಾಕುತ್ತವೆ.
 ರಾಜ ಮಹಾರಾಜರ ಚರಿತ್ರೆಯಲ್ಲೂ  ಕ್ರೀಡೆಗಳಿಗೆ ಉನ್ನತ ಮಾನ್ಯತೆ ಇದೆ. ಕರ್ನಾಟಕದಲ್ಲಿರುವ ಹಲವು ಗ್ರಾಮೀಣ ಕ್ರೀಡೆಗಳು ಸಖತ್ ಖುಷಿ ಕೊಡುತ್ತವೆ. ಅಂತೆಯೇ ಕೆಲವು ಕ್ರೀಡೆಗಳು ಜೂಜಾಟವೆಂದೇ ಬಿಂಬಿತವಾದರೂ ಅವು ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುತ್ತವೆ. ಅದರಲ್ಲಿ ಪ್ರಾಣಿಗಳ ನಡುವಿನ ಕಾದಾಟ ಅಂದರೆ ಯುದ್ಧದೊಳಗಿನ ಕಾಳಗವನ್ನು ನೆನಪಿಸುತ್ತದೆ. ಇದು ಪ್ರಾಣಿಗಳಿಗೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಬಲ ಕೊಡುತ್ತದೆ. ಅದೇ ಟಗರು ಕಾಳಗ..
  ಈ ಟಗರು ಕಾಳಗ ಹಾಲುಮತ ಸಮುದಾಯದ ಯುವಕರ ಜೀವಾಳ. ಇಲ್ಲಿ ಕುರುಬರು ಕೇವಲ ಕುರಿ ಸಾಕಿ ಜೀವನ ಸಾಗಿಸುವುದಲ್ಲ. ಬದಲಿಗೆ ಗ್ರಾಮೀಣ ಕ್ರೀಡೆಗಳ  ಮೂಲಕ ಸಂಘಟನೆಯಲ್ಲಿ ತೊಡಗಿದ್ದಾರೆ.
 ಕ್ರಿಕೆಟ್ ಎಂಬ ಮಾಂತ್ರಿಕ ಕ್ರೀಡೆ ಬಂದಾಗಿನಿಂದ ಎಲ್ಲೆಡೆ ಗ್ರಾಮೀಣ ಕ್ರೀಡೆಗಳು ಮೂಲೆಗುಂಪಾಗಿ ನಶಿಸಿಹೋಗುತ್ತಿವೆ. ಕ್ರಿಕೆಟ್ ಇಂದು ಜೂಜಾಟ ಆಡುವ ದೊಡ್ಡ ಆಟವಾಗಿದೆ. ಇಂತಹ ಕ್ರಿಕೆಟ್ ದಾಳಿಯ ನಡುವೆಯೂ ರಾಜ್ಯದ ವಿವಿದೆಡೆ ಅದರಲ್ಲೂ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗಗಳು ನಡೆಯುತ್ತವೆ.
 ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಕಲಬುರಗಿ ವಿಭಾಗದ ತಿಂಥಿಣಿ ಮಠದ ನೇತೃತ್ವದಲ್ಲಿ  ಪ್ರತಿವರ್ಷ ಜನವರಿ 12.13.14 ರಂದು ನಡೆಯುವ  ಹಾಲುಮತ ಸಂಸ್ಕೃತಿ ವೈಭವದ ಸಂದರ್ಭದಲ್ಲಿ  ರಾಜ್ಯ ಮಟ್ಟದ ಟಗರುಗಳ ನಡೆಯುತ್ತದೆ. ಇದು ನಮ್ಮ ಸಮುದಾಯದ ಸಂಘಟನೆಯನ್ನು ಕ್ರೀಡೋತ್ಸಾಹದ ಮೂಲಕ ಒಂದೆಡೆ ಸೇರಿಸುವ ಪ್ರಯತ್ನವೂ ಹೌದು.
 ಕ್ರೀಡಾ ಇತಿಹಾಸ ಇಲ್ಲಿ ಮರೆಯಾಗಿಲ್ಲ. ಇಲ್ಲಿ ಜಿಗಿದು ಕಾಳಗಕ್ಕಿಳಿಯುವ ಟಗರುಗಳ ಬೆಲೆ ಕೇಳಿದರೆ ನೀವು ತಣ್ಣಗಾಗುತ್ತೀರಿ ಏಕೆಂದರೆ ಇವುಗಳು 60 ಸಾವಿರದಿಂದ ಒಂದೂವರೆ ಲಕ್ಷದಷ್ಟು ಬೆಲೆಯಿದೆ. ಮಣ್ಣಲ್ಲಿ ಬಿದ್ದು ಕಾಳಗಕ್ಕಿಳಿಯುವ ಕುಸ್ತಿ ಪೈಲ್ವಾನರಿಗಿಂತ ನಾವೇನೂ ಕಮ್ಮಿ ಇಲ್ಲವೆಂಬಂತೆ ಟಗರುಗಳೂ ಕಾದಾಟಕ್ಕಿಳಿಯುತ್ತವೆ.
 ಈ ಕುರಿ ಕಾಳಗವನ್ನು ನೋಡಲು ಮಕ್ಕಳು, ಯುವಕರು, ವಯಸ್ಕರು ಸಾವಿರಾರು ಸಂಖ್ಯೆಯಲ್ಲಿ ಸಾಲು ಸಾಲು ನಿಂತು ನೋಡಿ ಸಂಭ್ರಮಿಸ್ತಾರೆ. ನಾನು ಕಂಡ ಅಪ್ರತಿಮ ಹೋರಾಟ ಅಂದ್ರೆ ಅದು ದಾವಣಗೆರೆ ಜಿಲ್ಲೆಯಲ್ಲಿ  ನಡೆಯುವ ಸ್ಪರ್ಧೆ. ಇಲ್ಲಿ ಕುಸ್ತಿ ಹಾಗೂ ಟಗರಿನ ಕಾಳಗಗಳು ಸಖತ್ತಾಗಿ ವಿಜೃಂಭಣೆಯಿಂದ ನಡೆಯುವ ಆಟಗಳಾಗಿವೆ. ಸಿಡಿದು ಅಬ್ಬರಿಸಿ ಆಕ್ರೋಶಗೊಂಡು ಕಾಳಗದಲ್ಲಿರುವ ಟಗರುಗಳ ಹೆಸರುಗಳೂ ಅಷ್ಟೇ ರೋಚಕವಾಗಿರುತ್ತವೆ. ಮೇಲೆ ಹೇಳಿದಂತೆ ಡಿಫರೆಂಟ್ ಡಿಫರೆಂಟ್ ಹೆಸರುಗಳಿವೆ.

ಸಾಕುವ ವಿಧಾನ:
 ಇಲ್ಲಿ ಮಾಮೂಲಿ ಕುರಿಗಳಂತೆ ಇವುಗಳನ್ನು ಸಾಕಲಾಗುವುದಿಲ್ಲ. ಬದಲಿಗೆ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಅವುಗಳಿಗೆ ಹಿಂಡಿ, ಬೂಸ, ಹಸಿರು ಮೇವು ಹೀಗೆ ವಿವಿಧ ಬಗೆಯ ಆಹಾರ ನೀಡುವ ಮೂಲಕ ತಾಲೀಮು ಕೊಡಲಾಗುತ್ತದೆ. ಅವುಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ತಳಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಸೂಕ್ತ ರೀತಿಯ ಆರೋಗ್ಯ ನೀಡಲಾಗುತ್ತದೆ. ಮುಂಜಾನೆ ಮತ್ತ ಸಂಜೆ ವಾಕ್ ಕರೆದುಕೊಂಡು ಹೋಗುತ್ತಾರೆ.
 ಒಟ್ಟಾರೆ ಈ ಕ್ರೀಡೆಯ ದಿನ ಜನ ಜಾತ್ರೆಯೇ ಸೇರುತ್ತದೆ. ಯುವಕರು ಮಕ್ಕಳು ಬಂದು ಜಾತ್ರೆಯಂತೆ ಆಚರಿಸುತ್ತಾರೆ. ಅಲ್ಲದೆ ತಮ್ಮ ಪ್ರೀತಿಯ ಟಗರುಗಳೊಂದಿಗೆ ಬಂದು ಕಾಳಗ ಆಡುತ್ತಾರೆ ಅದಕ್ಕಾಗಿ ಇದು ನೆನಪಿನಂಗಳದಲ್ಲಿ ಉಳಿಯುತ್ತದೆ.

 ಬಾಕ್ಸ್ ...
 ಗ್ರಾಮೀಣ ಕ್ರೀಡೆಯಾಗಿ ಪರಿಗಣಿಸಲಿ...
 ಟಗರು ಕಾಳಗ ತುಂಬ ಮನರಂಜನೆ ನೀಡುತ್ತದೆ. ಸಮುದಾಯದ ಯುವಕರ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದಿಗೂ ಕೆಸರುಗದ್ದೆ, ಲಗೋರಿ ಸೇರಿದಂತೆ ಅನೇಕ ಆಟಗಳು ಗ್ರಾಮೀಣ ಕ್ರೀಡೆಗಳಲ್ಲಿವೆ. ಆದರೆ ಈ ಕುರಿ ಹುಂಡಿ ಅಥವಾ ಟಗರು ಕಾಳಗವನ್ನು ಗ್ರಾಮೀಣ ಕ್ರೀಡೆ ಎಂದು ಪರಿಗಣಿಸಿಲ್ಲ ಅದನ್ನು ಸರಕಾರ ಮಾಡಲಿ. ಅಲ್ಲದೆ ಟಗರು ಕಾಳಗ ಸ್ಪರ್ಧೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ.
  ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ


 ‘‘ ಕುರಿ ಕಾಳಗ ಎನ್ನುವುದು ಪಕ್ಕಾ ಗ್ರಾಮೀಣ ಕ್ರೀಡೆ. ಇದನ್ನು ನಾವು ಸಣ್ಣವರಿಂದ ಅಂದ್ರೆ ಸುಮಾರು 45 ವರ್ಷದಿಂದ ನಾನು ಕುರಿ ಹುಂಡಿಯಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿಯ ಟಗರುಗಳ ಕಾದಾಟದ ನೋಟ ಜನತೆಯನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುತ್ತವೆ. ಅಲ್ಲದೆ ಇವುಗಳನ್ನು ನಾವು ಮಕ್ಕಳಂತೆ ಸಾಕುತ್ತೇವೆ.’’
  ಭೀರಪ್ಪ, ಟಗರು ಮಾಲಿಕ



 ‘‘ ಕನ್ನಡ ನಾಡಿನಲ್ಲಿ ಮಲೆನಾಡು, ಕರಾವಳಿ, ಬಯಲುಸೀಮೆ. ಅರೆಮಲೆನಾಡು, ಪಶ್ಚಿಮ ಘಟ್ಟ ಸೇರಿದಂತೆ ಎಲ್ಲೆಡೆ ವಿವಿಧ ಆಟಗಳಿವೆ ಈ ಕುರಿಕಾಳಗ ಮಾತ್ರ ಕುರುಬರಿಗೆ  ಅಚ್ಚುಮೆಚ್ಚು, ಕುಸ್ತಿಯಂತೆ ಇದು ಸಖತ್ ಪವರ್‌ಫುಲ್. ಇದು ಕನಕ ಜಯಂತಿ ಅಥವಾ ಹಾಲುಮತೋತ್ಸವ ಸಂದರ್ಭದಲ್ಲಿ ಎಲ್ಲೆಡೆ ನಡೆಯಬೇಕಿದೆ.’’
  ಎಚ್. ಆರ್. ಶಿವರುದ್ರಪ್ಪ, ಮಾಜಿ ಪ್ರಧಾನರು.
 ನಿಕಟಪೂರ್ವ ಅಧ್ಯಕ್ಷರು, ಹರ್ತಿಕೋಟೆ ಉಣ್ಣೆ ಕೈ ಮಗ್ಗ ನೇಕಾರರ ಸಹಕಾರ ಸಂಘ



No comments:

Post a Comment