Friday, October 2, 2015

ಗುಳೆ ಎಫೆಕ್ಟ್‌ನಿಂದ ಶಾಲೆಯಲ್ಲಿ ಮಕ್ಕಳ ಕೊರತೆ


 ಗುಳೆ ಎಫೆಕ್ಟ್‌ನಿಂದ ಶಾಲೆಯಲ್ಲಿ ಮಕ್ಕಳ ಕೊರತೆ 
 * ಊರುಗಳೆಲ್ಲಾ ಖಾಲಿ ಖಾಲಿ  * ಮನೆಯಲ್ಲಿ  ಪಾಲಕರೂ ಇಲ್ಲ ಮಕ್ಕಳೂ ಇಲ್ಲ

 ಮಾಲತೇಶ್ ಅರಸ್ ಹರ್ತಿಮಠ
 ಗಂಗಾವತಿ ಬ್ಯೂರೋ: ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಭಾಗಗಳ ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಇದೀಗ ಮಕ್ಕಳ ಕೊರತೆ ಎದುಗಾಗಿದೆ. ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಬಂದರೆ, ವಿದ್ಯಾರ್ಥಿಗಳು ಕಡ್ಡಾಯವಾಗಿ ಗೈರು ಹಾಜರಾಗುತ್ತಿದ್ದಾರೆ.
 ಹೌದು.. ಮುಂಗಾರು ಮಳೆ ಬಾರದೆ ಕಂಗಾಲಾಗಿರುವ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ರೈತರು ಕುಟುಂಬ ಸಮೇತ ಊರುಗಳ ತೊರೆದು ಬೆಂಗಳೂರು, ಮಂಗಳೂರು, ಗೋವಾಗಳತ್ತ ಗುಳೇ ಹೊರಟಿರುವುದು ಶಾಲೆಗಳು ಹಾಗೂ ಊರುಗಳು ಖಾಲಿ ಖಾಲಿಯಾಗಲು ಪ್ರಮುಖ ಕಾರಣ.
 ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲದೇ ಹಾವೇರಿ, ಗದಗ, ಬಿಜಾಪುರ, ಬೆಳಗಾವಿ, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ಬರದ ಛಾಯೆ ಆವರಿಸಿದೆ. ಉದ್ಯೋಗ ಅರಸಿ ಕುಟುಂಬ ಸಮೇತ ಊರು ಬಿಟ್ಟಿರುವುದರಿಂದ ಗ್ರಾಮಗಳೆಲ್ಲಾ  ಬಿಕೋ ಎನ್ನುತ್ತಿವೆ.
 ಶಾಲೆಯಲ್ಲಿ ಮಕ್ಕಳ ಕೊರತೆ:
 ಇಲ್ಲಿ ವ್ಯವಸಾಯ ನಂಬಿದ ಕುಟುಂಬಗಳೇ ಹೆಚ್ಚಾಗಿದ್ದು ಅನಿವಾರ್ಯವಾಗಿ ಮನೆಬಿಟ್ಟು ಕೆಲಸಕ್ಕೆ ಹೊರಟಾಗ ಮಕ್ಕಳನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಶಾಲೆಗೆ ಹೋಗಬೇಕಾದ ಮಕ್ಕಳು ಪಾಲಕರಿಲ್ಲದೆ ಇರಲು ಸಾಧ್ಯವಿಲ್ಲ ಹೀಗಾಗಿ ಶಾಲೆಗೆ ಚಕ್ಕರ್ ಹಾಕುತ್ತಿರುವುದು ಮಾಮಾಲು. ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದರೇ ಗುಳೆ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಶೇ 60 ಕಡಿಮೆಯಾಗುತ್ತದೆ ಎನ್ನುತ್ತಾರೆ.
 ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚು:
 ಬರದ ದಾಳಿಗೆ ತತ್ತರಿಸಿ ಗುಳೆ ಹೊರಟಿರುವ ಜಿಲ್ಲೆಯಲ್ಲಿ  ಕೊಪ್ಪಳದ ಹಳ್ಳಿಗಳೇ ಹೆಚ್ಚು. ಲಾರಿ, ಟ್ರಾಕ್ಟರ್, ಟಂಟಂಗಳಲ್ಲಿ ಹೊರಟಾಗ ಪಾಲಕರಿಗಿಂತ ಹೆಚ್ಚು ಮಕ್ಕಳೇ ಕಂಡು ಬರುತ್ತಾರೆ. ಸರ್ಕಾರ ಬಿಸಿಯೂಟ ನೀಡಿದರೂ ಪಾಲಕರಿಲ್ಲದ ಮನೆಯಲ್ಲಿ ಮಕ್ಕಳು ಇರುವುದಾದರು ಹೇಗೆ ಎಂಬಂತೆ  ಊರು ಬಿಟ್ಟು ನಡೆಯುತ್ತಿದ್ದಾರೆ.
 ಒಟ್ಟಾರೆ, ಬರದ ಬಿಸಿ ರೈತರಿಗೆ ಅಲ್ಲದೆ ರೈತ ಮಕ್ಕಳಿಗೂ ತಟ್ಟಿದ್ದು ವಿದ್ಯಾರ್ಥಿಗಳು ಕಾರ್ಮಿಕರಾಗಿ ದುಡಿಯುವಂತಾಗಿದೆ.

 ಬಾಕ್ಸ್...
 ಶೈಕ್ಷಣಿಕ ಹಿನ್ನಡೆ...
 ಮಕ್ಕಳು ಶಾಲೆ ತೊರೆದು ಪಾಲಕರೊಂದಿಗೆ ಬೇರೆಡೆ ಹೋದಾಗ ಅಲ್ಲಿ  ಕಟ್ಟಡ ಕಾರ್ಮಿಕರಾಗಿ ದುಡಿಯಲೇ ಬೇಕು. ಅಥವಾ ಮೂರು ವರ್ಷದೊಳಗಿದ್ದ ತಮ್ಮನೋ, ತಂಗಿಯನ್ನೋ ನೋಡಿಕೊಳ್ಳಲು ಓದುವ ಮಕ್ಕಳು ಪಾಲಕರೊಂದಿಗೆ ಇರಬೇಕಾದಾಗ  ಶೈಕ್ಷಣಿಕ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಪಾಲಕರು ಗಮನ ಹರಿಸುತ್ತಿಲ್ಲ ಎಂದು ಶಿಕ್ಷಕರು ಬೇಸರ ಹೊರಹಾಕುತ್ತಿದ್ದಾರೆ.

 ಕೋಟ್.
 ಮಳೀನೂ ಹೋತು ಬೆಳೀನೂ ಕೈ ಸೇರಲಿಲ್ಲ. ಊರಾಗ ಖಾಲಿ ಕುಂತು ಏನ್ ಮಾಡ್ಬೇಕು. ದುಡ್ಯಾಕರ ಹೋದ್ರ ನಾಲ್ಕು ದುಡ್ಡು ಕೈಯಾಗ ಆಡ್ತಾವ. ನಾವ್ ಹೊಂಟ್ ಮ್ಯಾಲೆ ಮಕ್ಕಳ ಬಿಟ್ ಹೋಗವಲ್ದು. ಅವು ನಮ್ ಕೂಡೇ ಇರಬೇಕು. ಮೂರು ತಿಂಗಳು ಬಿಟ್ ಬಂದ್ ಮ್ಯಾಲಾ ಮಕ್ಳು ಶಾಲಿಗೆ ಹೋಕ್ತಾವ.
  ಹನುಮಪ್ಪ , ಗುಡದೂರು ಗ್ರಾಮಸ್ಥ. ಕುಷ್ಟಗಿ


 ಕೋಟ್..
  ಶಾಲೆ ಬಿಟ್ ನಮ್ ಮಕ್ಕಳು  ನಮ್ ಜೊತಿಗಾ ಬರತಾವ. ಕಲಿಕಿ ಹಿಂದ ಉಳಿತದಾ. ಮಾಸ್ತರಾ ಮಕ್ಕಳ ಶಾಲಾ ತಪ್ಸಾಬ್ಯಾಡ್ರೀಯವ್ವಾ ಅಂತಾರ, ನಾವಿಲ್ದೆ ಮಕ್ಕಳೂ ಹೆಂಗ ಇರ‌್ತಾವಾ. ಮಗ ಸಣ್ಣವ ಅದನಾ, ಅವ್ನ ನೋಡ್ಕಾಣಕ್ಕಾ ದೊಡ್ಡಾಕಿ ಬೇಕಲ್ಲ.
                                      ಮಲ್ಲವ್ವ  ಉಪ್ಪಾರ, ಕುಷ್ಟಗಿ ರೈತ ಮಹಿಳೆ

 ಬಾಕ್ಸ್...
 ಶಿಕ್ಷಣ ಇಲಾಖೆಗೆ ಸೂಚನೆ...
 ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯ ಶಿಕ್ಷಣ ಇಲಾಖೆಯದ್ದು, ಗುಳೆ ಹೋಗಿರುವ ಕುಟುಂಬಗಳ ಮಕ್ಕಳ ಶಿಕ್ಷಣದ ಬಗ್ಗೆ ಆತಂಕವಿದೆ, ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಗತ್ಯ ವ್ಯವಸ್ಥೆ ರೂಪಿಸಬೇಕು  ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ  ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಬಾಕ್ಸ್...
 ಶಾಲೆಯಿಂದ ಹೊರಗುಳಿದ ಮಕ್ಕಳು (ಕೊಪ್ಪಳ)
 1-5ನೇ ತರಗತಿವರೆಗೆ- 218 ಮಕ್ಕಳು
 6-7 ನೇ ತರಗತಿವರೆಗೆ- 274 ಮಕ್ಕಳು
 ( ಉಳಿದಂತೆ ಶಾಲೆಗಳಲ್ಲಿ  ಮಕ್ಕಳು ಅಧಿಕ ಪ್ರಮಾಣದಲ್ಲಿ ಗೈರು ಹಾಜರು ಇದ್ದರೂ ಹಾಜರಾತಿ ಮಾತ್ರ ಹಾಕುತ್ತಿದ್ದು, ಮಾಹಿತಿ ಬಹಿರಂಗ ಪಡಿಸಬೇಡಿ ಎಂದು ಶಿಕ್ಷಕರು ಮನವಿ ಮಾಡಿದ್ದಾರೆ)


No comments:

Post a Comment