ಕಮಲ ಪಕ್ಷನೇ ಆಪರೇಷನ್ ಹಾಕ್ತಾ ಐತೆ.
ಅಬ್ಬಾಬ್ಬ, ಅದೇನು ಬಿಸಿ ಅಂತಿಯೋ ಬಸ್ಯಾ.. ಬಂದ್ ಬಿಸಿ. ನಾಮಪತ್ರ ಸಲ್ಲಿಕೆ ಬಿಸಿ. ಪಕ್ಷದಿಂದ ಪಕ್ಷ ಹಾರೋ ಬಿಸಿ. ಅಂದ ಪಟ್ರೆ. ಭಾರತ್ ಬಂದ್ ಅಂತಾ ಬಂದ್ ಬಿಸಿ. ಅತ್ಲಾಗೆ ಸ್ಥಳೀಯ ಸಂಸ್ಥೆ ಚುನಾವಣೆ ಅಂತ ಎಲ್ಲಾ ವಾರ್ಡ್‌ಗಳಲ್ಲೂ ಬಿಸಿ. ಇನ್ನೂ ವಿಧಾನ ಸೌಧದಲ್ಲಿ ಪಕ್ಷ ಬಿಟ್ ಪಕ್ಷವಾ ಸೇರ‌್ತಾ ಅವ್ರೇ ಅಲ್ಲಿಯೂ ಪಕ್ಷಾಂತರ ಬಿಸಿ ಐತೆ ಕಣಪ್ಪಾ. ಅದೇನೂ ಅಂತ ನಂಗೆ ಬಿಡಿಸಿ ಹೇಳಪ್ಪಾ ಕೇಳ್‌ತೀನಿ ಅಂತ ಪತ್ರುವಳ್ಳಿ ಜಕಲಿ ಕಟ್ಟೆ ಮ್ಯಾಲೆ ಬಿಡಿ ಹಚ್ಕಂಡ್ ಮಾತಿಗಿಳಿದ.
ಬಿಡೋ ಮಾರಾಯ ಏನ್ ಹೇಳ್ತಿಯಾ.. ನಾಮ ಪತ್ರ ಸಲ್ಲಿಸೋದು ಅಂದ್ರೆ ಸುಮ್ಕೇ ಅಂದ ಕಂಡ್ಯಾ, ಇದೂ ವಿಧಾನ ಸಭಾ ಚುನಾವಣಾ ಸ್ಟೈಲಾಗೆ ಐತಪಾ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕದನ ಕುತೂಹಲ ಕೆರಳಿಸ್ತಾ ಐತೇ ಅಂತಿನಿ. ವಾರ್ಡ್‌ಲಾರ್ಡ್ ಗಳಾಗಬೇಕು ಅಂತ ಸಾಲು ಸಾಲಾಗಿ ನಾಮಪತ್ರ ಸಲ್ಲಿಸ್ತಾವ್ರೇ. ಕಾಂಗ್ರೇಸು, ಬಿಜೆಪಿ, ಕೆಜೆಪಿ, ಜೆಡಿಎಸ್, ಬಿಎಸ್‌ಆರ್, ಇನ್ನೂ ಪಕ್ಷೇತರ ಒಂದೋ ಎರಡೋ ಎಲ್ಲರೂ ಹಾಕ್ತಾ ಅವ್ರೇ.
ಇನ್ನೂ ಎಂಎಲ್‌ಎ ಎಲೆಕ್ಷನ್ನು ನೂರು ದಿನ ಐತೆ ಈಗ್ಲೆ ‘ಬಿ’ ಫಾರಂ ನಂಗೆ ಬೇಕು, ನಂಗೆ ಬೇಕು ಅಂತ ಹಾಲಿಗಳು ಮಾಜಿಗಳು. ಸೋತೋರು ಎಲ್ಲಾ ಸಾಲಾಗಿ ನಿಂತಾವ್ರಂತೆ. ಇತ್ಲಾಗೆ ಎಲೆಕ್ಷನ್ ಘೋಷಣೆ ಮಾಡಿದ ಕೂಡಲೇ ಅದೇನು ಕೈ ಪಕ್ಷಕ್ಕೆ ಶಕ್ತಿ ಬಂದ್ ಬಿಡುತ್ತೆ ಅಂತಿಯಾ ಬಿಜೆಪಿ ಹಾಲಿಗಳೆಲ್ಲಾ ದಿಡೀರಂತ ಕಮಲಕ್ಕೆ ರಾಜೀನಾಮೆ ಬಿಸಾಕಿ ಸೋನಿಯಾ ಗಾಂಧಿಗೆ ಜೈ ಅಂತಾವ್ರೆ.
ಅಲ್ಲಾ ಕಣಲೇ ಪಟ್ರೆ 5 ವರ್ಷ ಕಾದು ಕಾದು ಪೋಸ್ಟರೂ ಹಚ್ಚಿ, ಪ್ಲೆಕ್ಸ್ ಹಾಕಿಸಿ ನಾನೇ ಈ ಕ್ಷೇತ್ರಕ್ಕೆ ಕ್ಯಾಂಡಿಡೇಟು ಅಂತ ಹೇಳ್ತಾ ಇದ್ದವ್ರ ಇದೀಗ ಟಿಕೆಟ್ ಕೊಡ್‌ಲಿಲ್ಲಾ ಅಂದ್ರೆ ಏನ್ ಮಾಡೋದು ಹೇಳು ಅಂದ ಬಸ್ಯಾ ...
ಇರಲಿ ಬಿಡಪ್ಪ ಅವರು ಆಪರೇಷನ್ ಕಮಲ ಅಂತವಾ ಮಾಡಿ ಸರ್ಕಾರ ಮಾಡಿದ್ರು, ಇದೀಗ ಕಮಲ ಪಕ್ಷನೇ ಆಪರೇಷನ್ ಆಕ್ತಾ ಐತೆ. ಅದೇ ಅದು ಒಂತರಾ ಕ್ರಿಕೇಟ್ ಆಟದಾಗೆ ಹಿಟ್ ವಿಕೇಟ್ ಇದ್ದಂಗೆ. ಅವರ ವಿಕೇಟ್ ಅವರೇ ಮೂರ್‌ಕಣದು ಅಂತಾರಲ್ಲಾ ಹಂಗೆ.
ಈ ಪಕ್ಷಾಂತರ ಪರ್ವ ಅನ್ನೋದು ಬಾರಿ ಆಯ್ತಪ್ಪ. ಚುನಾವಣೆ ಹತ್ರಾ ಬಂದ್ ಕೂಡಲೇ ಹಂಗೆ ನೋಡು. ಅದೇನೋ ಗೆಲ್ಲೋ ಕುದುರೆಗಳಿಗೆ ಆದ್ಯತೆ ಕೊಡ್ತಾರಂತೆ, ಹೊಸಬರಿಗೆ ಮಣೆ ಹಾಕೋದು, ಹಳಬರನ್ನೇ ಕಣಕ್ಕಿಳಿಸೋದು ಅಂತ ಲೆಕ್ಕಾಚಾರ ಹಾಕ್ತಾ ಇದಾರಂತೆ. ಹಳಬರಿಗೆ ಮಣೆ ಹಾಕ್ಲಿಲ್ಲಾ ಅಂದ್ರೆ ಮುಂದೆ ವಿಧಾನ ಸಭಾ ಚುನಾವಣೆಗೆ ಯಡವಟ್ಟಾಗುತ್ತೇ ಅಂತಾ ಯೋಚ್ನೇ ಮಾಡ್ತಾ ಇದಾರಂತೆ. ಯಾಕಂದ್ರೆ ಇದು ಮಿನಿ ಸಮರ ಅಲ್ವೇ ಅಂದ ಪಟ್ರೆ.
ಹಳಬರಾಗಲಿ, ಹೊಸಬರಾಗಲಿ ಅಭ್ಯರ್ಥಿ ಗೆಲುವು ಮುಖ್ಯ. ಗೆಲ್ಲೋ ಕುದುರೆಗೆ ಆದ್ಯತೆ... ಅಂತವಾ ಅಂದ್ರೆ ಬಂಡಾಯವಾಗೋದು ಗ್ಯಾರಂಟಿ ಅಂತ ಎಲ್ಲರೂ ತಲೆ ಕೆಡಿಸಿಕೊಂಡಿದ್ದರೆ ಕಣಲೇ.. ಅಭ್ಯರ್ಥಿ ಆಯ್ಕೆ ಅನ್ನೋದು ಅತ್ತ ದರಿ - ಇತ್ತ ಪುಲಿ ಅನ್ನೋತರ ಆಗಿದೆ ಅಂತ ಮಾತಿಗೆ ಮಂಗಳಾರತಿ ಹಾಡಿ ಚಾ ಕುಡಿಯಾಕೆ ಹೋಟ್ಲಿಗೆ ಹೋದ ಬಸ್ಯಾ.....
ಮಾಲತೇಶ್ ಅರಸ್..
No comments:
Post a Comment