ಈಗ ಕಮಲಕ್ಕೇ ಆಪರೇಷನ್..
ಇದೀಗ ಎಲ್ಲಿ ನೋಡಿದರು ಬಿಸಿ ಬಿಸಿ ವಾತಾವರಣ ಇದೆ. ಭಾರತ್ ಬಂದ್ ಅಂತಾ ಬಂದ್ ಬಿಸಿಯಾಗಿದ್ದು ಆಯ್ತು. ಹೈದ್ರಾಬಾದ್ ಬಾಂಬ್ ದಾಳಿಯಾಗಿ ಬಿಸಿಯಾಯ್ತು. ಸ್ಥಳೀಯ ಸಂಸ್ಥೆ ಚುನಾವಣೆ ಅಂತ ಎಲ್ಲಾ ವಾರ್ಡ್‌ಗಳಲ್ಲೂ ಬಿಸಿ. ಇನ್ನೂ ವಿಧಾನಸೌಧದಲ್ಲಿ ಪಕ್ಷ ಬಿಟ್ ಪಕ್ಷ ಸೇರುವವರ ಬಿಸಿ. ಟಿವಿಗಳಲ್ಲಿ ಬರೀ ರಾಜಕಾರಣಿಗಳ ಮಂಗನಾಟದ್ದೆ ಬಿಸಿ ಸುದ್ದಿ.
ನಾಮ ಪತ್ರ ಸಲ್ಲಿಸೋದು ಅಂದ್ರೆ ಸುಮ್ಮನೇ ಅಲ್ಲ, ಸ್ಥಳೀಯ ಸಂಸ್ಥೆ ಎಲೆಕ್ಷನ್ ಕೂಡಾ ವಿಧಾನ ಸಭಾ ಚುನಾವಣಾ ಸ್ಟೈಲ್ಲಲ್ಲೇ ಸಾಗುತ್ತಿದ್ದು ಕದನ ಕುತೂಹಲ ಕೆರಳಿಸುತ್ತಾ ಇರುವ ಸಂದರ್ಭದಲ್ಲಿ ವಾರ್ಡ್‌ಲಾರ್ಡ್‌ಗಳಾಗಬೇಕು ಅಂತ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಇನ್ನೂ ಎಂಎಲ್‌ಎ ಎಲೆಕ್ಷನ್ನು ನೂರು ದಿನ ಇರುವಾಗಲೇ ‘ಬಿ’ ಫಾರಂ ನನಗೆ ಬೇಕು ನನಗೆ ಬೇಕು ಅಂತ ಹಾಲಿಗಳು ಮಾಜಿಗಳು. ಸೋತೋರು ಎಲ್ಲಾ ಸಾಲಾಗಿ ನಿಲ್ಲಲು ಶುರು ಮಾಡಿದ್ದಾರೆ. ಇತ್ತ ಎಲೆಕ್ಷನ್ ಘೋಷಣೆ ಮಾಡಿದ ಕೂಡಲೇ ಅದೇನು ಕೈ ಪಕ್ಷಕ್ಕೆ ಶಕ್ತಿ ಬರುತ್ತೆ ಅನ್ನೋದು ಇದೀಗ ಕೈ ಪಕ್ಷಕ್ಕೆ ಸೇರುವವರಿಂದ ತಿಳಿಯುತ್ತಿದೆ. ಬಿಜೆಪಿ ಹಾಲಿಗಳೆಲ್ಲಾ ದಿಡೀರಂತ ಕಮಲಕ್ಕೆ ರಾಜೀನಾಮೆ ಬಿಸಾಕಿ ಸೋನಿಯಾ ಗಾಂಧಿಗೆ ಜೈ ಎನ್ನವ ಖಯಾಲಿಯನ್ನ ಶುರು ಮಾಡಿದ್ದಾರೆ.
ಎಂಬಿಬಿಎಸ್ ಓದದೇ ಬಿಜೆಪಿ ನಾಯಕರು ಮಾಡಿದ ಆಪರೇಷನ್ ಕಮಲ ಅವತಾರ ಇದೀಗ ಅವರಿಗೆ ಉಲ್ಟಾ ಹೊಡೆದಿದೆ. ಅಂದು ಆಪರೇಷನ್ ಕಮಲ ಅಂತ ಮಾಡಿ ಸರ್ಕಾರ ರಚನೆ ಮಾಡಿದರು. ಇದೀಗ ಕಮಲ ಪಕ್ಷನೇ ಆಪರೇಷನ್ ಆಗೈತೆ. ಅದೂ ಕೂಡಾ ಒಂದ್ ರೀತಿಲಿ ಕ್ರಿಕೇಟ್ ಆಟದಂತೆ ಆಗಿದೆ. ಹಿಟ್ ವಿಕೇಟ್ ಇದ್ದಂಗೆ. ದಿನಕ್ಕೊಬ್ಬರು ಇಲ್ಲಿ ಕಮಲಕ್ಕೆ ಕೈ ಮುಗಿದು ಹೊರಕ್ಕೆ ಹೋಗುತ್ತಿದ್ದಾರೆ. ಇದೀಗ ಕಮಲ ಪಕ್ಷವನ್ನೇ ಅವರೇ ಕೈ ಯಾರೆ ಆಪರೇಷನ್ ಮಾಡ್ತಾ ಅವ್ರೇ.. ಆಪರೇಷನ್ ತಜ್ಞ ಡಾ. ಯಡಿಯೂರಪ್ಪ ನೋರು ಈಗ ಕಮಲದಿಂದ ತೆಂಗಿನಕಾಯಿ ಹಿಡ್‌ಕಂಡ್‌ಮ್ಯಾಲೆ ಕಮಲ ಮತ್ತೆ ಕೆಸರಿನಲ್ಲಿ ಸಿಕ್ಕಿಕೊಂಡತೆ ಆಗಿದೆ.
ಅದು ಅತ್ತ ಆದ್ರೆ ಇತ್ಲಾಗೆ ‘‘ಗೆಲ್ಲೋ ಕುದುರೆಗಳಿಗೆ ಆದ್ಯತೆ’’ ಎಂಬ ಮಾತು ಹೆಚ್ಚಾಗಿಯೇ ಕೇಳುಸ್ತಾ ಇದೆ. ಹೊಸಬರಿಗೆ ಮಣೆ ಹಾಕೋದು, ಹಳಬರನ್ನೇ ಕಣಕ್ಕಿಳಿಸೋದು ಅಂತ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಳಬರಿಗೆ ಮಣೆ ಹಾಕಲಿಲ್ಲ ಅಂದರೆ ಮುಂದೆ ವಿಧಾನಸಭಾ ಚುನಾವಣೆಗೆ ಯಡವಟ್ಟಾಗುತ್ತೇ ಅಂತಾ ಯೋಚನೆ ಮಾಡುತ್ತಿದ್ದಾರೆ. ಇದು ಮಿನಿ ಸಮರ ಅನ್ನೋದು ಇದೀಗ ಸಾಬೀತಾಗಿದೆ.
ಹಳಬರಾಗಲಿ, ಹೊಸಬರಾಗಲಿ ಅಭ್ಯರ್ಥಿ ಗೆಲುವು ಮುಖ್ಯ. ಗೆಲ್ಲುವ ಕುದುರೆಗೆ ಆದ್ಯತೆ... ಅಂದರೆ ಬಂಡಾಯವಾಗೋದು ಗ್ಯಾರಂಟಿ ಅಂತ ಎಲ್ಲರೂ ತಲೆ ಕೆಡಿಸಿಕೊಂಡಿದ್ದರೆ. ಅಭ್ಯರ್ಥಿ ಆಯ್ಕೆ ಅನ್ನೋದು ಅತ್ತ ದರಿ - ಇತ್ತ ಪುಲಿ ಎನ್ನುವಂತಾಗಿದೆ. ಮತ್ತೆ ರಾಜಕಾರಣಿಗಳ ಮಂಗನಾಟ ಶುರು ಅದಕ್ಕೆ ಹೇಳಿದ್ದು ಕಮಲ ಪಕ್ಷನೇ ಆಪರೇಷನ್ ಆಗ್ತಾ ಐತೆ ಅಂತ..
ಬಿಸಿಲಾದರೇನು, ಮಳೆಯಾದರೇನು
ಮತ ಹಾಕೋ ನೀನು
ಎಲೆಕ್ಷನ್ನಿಗೆ ನಿತ್ಕೋಂಡಿನಿ ನಾನು
ಅಂತ ಹಾಡುಗಳು ಎಲ್ಲಾ ವಾರ್ಡ್‌ನಲ್ಲಿ ಕೇಳಿಸೋಕೇ ಶುರುಮಾಡಿವೆ. ಅರೇ ಇದು ಆಪರೇಷನ್ ಕಮಲ ಹಾಡೋ. ಕಮಲಕ್ಕೆ ಆಪರೇಷನ್ ಮಾಡಿರೋ ಅನ್ನೋದು ಮಾತ್ರ ಹಾಡಿನಲ್ಲಿರಲಿಲ್ಲಾ... ಹಹ್ಹಹ್ಹಹ್ಹ..
-ಮಾಲತೇಶ್ ಅರಸ್
No comments:
Post a Comment